ಬೆಂಗಳೂರು: ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವ ಕಾರಣ ರಾಜ್ಯಾಧ್ಯಕ್ಷರಾಗಿ ಜೆಡಿಎಸ್ ಸಂಘಟನೆ ಮಾಡುವುದು ಕಷ್ಟ ಸಾಧ್ಯ. ಅದ್ದರಿಂದ ರಾಜ್ಯಾಧ್ಯಕ್ಷರ ಜೊತೆ ಪದಾಧಿಕಾರಿಗಳ ಬದಲಾವಣೆ ಆಗಬೇಕಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಇಂದು ಆಯೋಜಿಸಲಾಗಿದ್ದ ಪಕ್ಷದ ಸಭೆ ಮುಕ್ತಾಯದ ಬಳಿಕ ಮಾತನಾಡಿದ ಅವರು, ರಾಜ್ಯಾಧ್ಯಕ್ಷರು ಪದಾಧಿಕಾರಿಗಳ ನೇಮಕಕ್ಕೆ ಸಮಿತಿ ರಚನೆ ಆಗಲಿದೆ. ಪಕ್ಷದ ನಿಯಮಾವಳಿ ಗಮನದಲ್ಲಿಟ್ಟು ಸಮಿತಿ ರಚನೆ ಮಾಡಲಾಗುತ್ತದೆ. ಪದಾಧಿಕಾರಿಗಳ ಆಯ್ಕೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಸಂಘಟನೆಗೆ ತೊಂದರೆಯಾಗಬಾರದು ಎಂದು ಚಿಂತಿಸಲಾಗಿದೆ ಎಂದರು.
ಸದ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ಮಧು ಬಂಗಾರಪ್ಪ, ಪಿಜಿಆರ್ ಸಿಂಧ್ಯಾ, ವಿಶ್ವನಾಥ್ ಹೆಸರು ಕೇಳಿ ಬರುತ್ತಿದ್ದು, ಈ ಕುರಿತು ಅಂತಿಮ ತೀರ್ಮಾನ ಹೊರ ಬೀಳಬೇಕಿದೆ. ಇಂದಿನ ಸಭೆಯಲ್ಲಿ ಜಫ್ರುಲ್ಲಾ ಖಾನ್, ಎಂಎಲ್‍ಸಿ ಶರವಣ, ಶಾಸಕ ಗೋಪಾಲಯ್ಯ, ಮನೋಹರ್, ಅಪ್ಪಾಜಿಗೌಡ, ಬೆಂಗಳೂರು ನಗರ ವಕ್ತಾರ ಪ್ರಕಾಶ್, ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಭಾಗಿಯಾಗಿದ್ದರು.
ಇದೇ ವೇಳೆ ಲೋಕಸಭೆ ಚುನಾವಣೆಗೆ ಮೈತ್ರಿ ಕುರಿತು ಪ್ರತಿಕ್ರಿಯೆ ನೀಡಿದ ದೇವೇಗೌಡರು, ಚುನಾವಣೆ ಹೊಂದಾಣಿಕೆಗೆ ನಮ್ಮಿಂದ ತೊಂದರೆಯಾಗಬಾರದು. ಮುಂದಿನ ತಿಂಗಳು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲಾಗುವುದು. ಆದರೆ ಇಂದಿನ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೀಟು ಬಿಟ್ಟು ಕೊಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅಲ್ಲದೇ ಕಾಂಗ್ರೆಸ್ ಪಕ್ಷದೊಂದಿಗೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಘಟಕ ಅಧ್ಯಕ್ಷರ ಸಭೆಯ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸ ಪದಾದಿಕಾರಿಗಳ ನೇಮಕದ ಬಗ್ಗೆ ನಾನೇ ಸಭೆ ಕರೆಯಲು ಹೇಳಿದ್ದೆ. ನಾನೇ ಸಲಹೆ ಸೂಚನೆ ಕೊಟ್ಟಿದ್ದೇನೆ, ಏಳೆಂಟು ಜನರ ಹೆಸರು ಕೇಳಿಬಂದಿದೆ. ಪಕ್ಷದ ಹಿರಿಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಈ ಕುರಿತು ಒಂದು ವಾರದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.