ಬೆಂಗಳೂರು: ಬಿಎಸ್‍ಪಿ ಶಾಸಕ ಎನ್.ಮಹೇಶ್ ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಮೈತ್ರಿ ಸರ್ಕಾರದಲ್ಲಿ ಸಂಚಲನವನ್ನೇ ಹುಟ್ಟು ಹಾಕಿದೆ. ದಿಢೀರ್ ಅಂತಾ ಎನ್.ಮಹೇಶ್ ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ‘ಆಪರೇಷನ್ ಕಮಲ’ ನಡೆಯುತ್ತಿದ್ದೀಯಾ..? ಎಂಬ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಮೈತ್ರಿ ಸರ್ಕಾರದ ಭಾಗವಾಗಿ ಇರಲು ಇಚ್ಛಿಸದಕ್ಕೆ ತಾವು ಹೊರ ಬಂದಿರುವುದಾಗಿ ಎನ್.ಮಹೇಶ್ ಹೇಳಿಕೊಂಡಿದ್ದಾರೆ. ಆದ್ರೆ ಸಿಎಂ ಕುಮಾರಸ್ವಾಮಿ ಅವರ ಮೇಲೆ ಯಾವುದೇ ಅಸಮಾಧಾನವಿಲ್ಲ. ಮುಂದಿನ ಉಪ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡಲಿದ್ದೇನೆ ಅಂತಾನೂ ತಿಳಿಸಿದ್ದಾರೆ.
2019ರ ಲೋಕಸಭಾ ಚುನಾವಣೆಗೆ ಪಕ್ಷದ ಸಂಘಟನೆ ಜವಾಬ್ದಾರಿ ನನ್ನ ಮೇಲಿರುವುದರಿಂದ ಸಚಿವ ಸ್ಥಾನಕ್ಕಿಂತ ತನಗೆ ಪಕ್ಷ ಕಾರ್ಯವೇ ಮುಖ್ಯವಾಗಿದ್ದು, ಅದ್ದರಿಂದ ಸಚಿವ ಸ್ಥಾನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಪಬ್ಲಿಕ್ ಟಿವಿಗೆ ಎನ್.ಮಹೇಶ್ ತಿಳಿಸಿದ್ದಾರೆ.
Advertisement
Advertisement
ಮಹೇಶ್ ಅವರು ರಾಜೀನಾಮೆ ನೀಡುವ ಮುನ್ನವೇ ದೋಸ್ತಿ ಸರ್ಕಾರದ ಮಿತ್ರ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಜಿಲ್ಲೆಯಲ್ಲಿ ಸಚಿವ ಸ್ಥಾನ ಪಡೆದಿದ್ದ, ಹಿಂದುಗಳಿದ ವರ್ಗಗಗಳ ಕಲ್ಯಾಣ ಸಚಿವ ಸಿಎಸ್ ಪುಟ್ಟರಂಗ ಶೆಟ್ಟಿ ಅವರ ಕಡೆಗಣನೆ ಕಾರಣ ಎನ್ನಲಾಗಿದೆ. ಜಿಲ್ಲೆಯಲ್ಲಿ ನಡೆದಿದ್ದ ದಸರಾ ಕಾರ್ಯಕ್ರಮದ ಆಹ್ವಾನ ಪಟ್ಟಿಯಲ್ಲೇ ಮಹೇಶ್ ಅವರ ಹೆಸರನ್ನ ಮುದ್ರಣ ಮಾಡದೆ ನಿರ್ಲಕ್ಷ್ಯ ಮಾಡಲಾಗಿತ್ತು. ಈ ಕುರಿತು ಅಸಮಾಧಾನಗೊಂಡಿದ್ದ ಮಹೇಶ್ ಬೆಂಬಲಿಗರು ಜಿಲ್ಲಾ ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು.
Advertisement
ಇದರ ಬೆನ್ನಲ್ಲೇ ಸೋಮವಾರ ಹಾಗೂ ಮಂಗಳವಾರ ಎರಡು ದಿನ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದ ಮಹೇಶ್ ಅವರು ಪಕ್ಷದ ರಾಷ್ಟ್ರೀಯ ಮುಖಂಡರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿ ಅವರೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ಕಾಂಗ್ರೆಸ್ ಜೊತೆ ನಡೆಯುತ್ತಿರುವ ಸಮ್ಮಿಶ್ರ ಸರ್ಕಾರದಿಂದ ಹೊರಗೆ ಬನ್ನಿ ಎಂದು ಮಾಯಾವತಿ ಅವರು ಸೂಚನೆ ನೀಡಿದ್ದರು ಎನ್ನಲಾಗಿದೆ.
Advertisement
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಮಹೇಶ್ ಅವರು ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಸಿಎಂ ಕುಮಾರಸ್ವಾಮಿ ಹಾಗೂ ರಾಜ್ಯಪಾಲರಿಗೂ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದರು. ಮಾಯಾವತಿ ಅವರೊಂದಿನ ಚರ್ಚೆ ವೇಳೆ ರಾಜೀನಾಮೆ ನೀಡಿದ ಬಳಿಕ ಯಾವುದೇ ಕಾರಣಕ್ಕೂ ಯಾರ ಮನವಿಗೂ ಅವಕಾಶ ನೀಡದೆ ರಾಜೀನಾಮೆ ಹಿಂದೆ ತೆಗೆದುಕೊಳ್ಳುವ ಕುರಿತು ಯೋಚನೆ ಮಾಡಬಾರದು ಎಂದು ಸಲಹೆಯನ್ನು ನೀಡಿದ್ದರು ಎಂದು ಮಾಹಿತಿ ಲಭಿಸಿದೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಲಭ್ಯವಾಗುವ ಪರಿಶಿಷ್ಠ ವರ್ಗದ ಮತಗಳನ್ನು ಸೆಳೆಯುವ ಕಾರ್ಯ ತಂತ್ರದ ಲೆಕ್ಕಾಚಾರ ಎನ್ನುವ ಅನುಮಾನ ವ್ಯಕ್ತವಾಗಿದೆ.
ಲೋಕಸಭೆಗೆ ಫೈಟ್?
ಮಾಯಾವತಿಯವರು ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಕೆಲ ದಿನಗಳ ಹಿಂದೆ ಖಡಕ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಹೇಶ್ ಅವರು ರಾಜೀನಾಮೆ ನೀಡಿ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆ ಹಾಗೂ ಪ್ರಚಾರ ಕಾರ್ಯ ನಡೆಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಇದೇ ವೇಳೆ ಮಹೇಶ್ ಅವರು ಸಮಿಶ್ರ ಸರ್ಕಾರಕ್ಕೆ ನನ್ನ ರಾಜೀನಾಮೆಯಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸದ್ಯ ಘೋಷಣೆ ಆಗಿರುವ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv