– ಯೋಧನ ಮದ್ವೆ ಮಾಡಿಸ್ತೀವಿ ಎಂದ ಪುರೋಹಿತರು
ಬೆಳಗಾವಿ/ಬೆಂಗಳೂರು: ಗಡಿ ಕಾಯುವ ಯೋಧನ ಮದುವೆ ಮಾಡಿಸಲು ಪೂಜಾರಿಗಳೇ ಬರ್ತಿಲ್ಲ. ಜಮೀನಿನ ವಿಷಯಕ್ಕೆ ಯೋಧ ಹಾಗೂ ಅವರ ಕುಟುಂಬಕ್ಕೆ ಬಹಿಷ್ಕಾರ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಯೋಧನ ಕಣ್ಣೀರಿಗೆ ಆರ್ಮಿ ಪೋರಂ ಮಿಡಿದಿದೆ.
Advertisement
ಬೆಳಗಾವಿ ಜಿಲ್ಲೆ ರಾಮದುರ್ಗದ ತೋಟಗಿಟ್ಟಿಯಲ್ಲಿ ಯೋಧ ವಿಠ್ಠಲ್ ಕಡಕೋಳ ಅವರಿಗೆ ತಿರುಪತಿ ತಿರುಮಲ ದೇವಸ್ಥಾನದ ಅರ್ಚಕರನ್ನೇ ಕರೆಸಿ ಮದುವೆ ಮಾಡ್ತೀವಿ. ಈ ಊರವರು ಮದುವೆ ಮಾಡಿಸದೇ ಇದ್ದರೆ ಅಷ್ಟೇ ಹೋಯ್ತ ಅಂತ ಆರ್ಮಿ ಪೋರಂ ಅಧ್ಯಕ್ಷ ಶಶಾಂಕ್ ಕಿಡಿಕಾರಿದ್ದಾರೆ.
Advertisement
Advertisement
ಯೋಧನ ಮದುವೆ ನಾವು ಮಾಡಿಸ್ತೀವಿ ಎಂದ ರಾಜ್ಯದ ಪುರೋಹಿತರು:
ಪಬ್ಲಿಕ್ ಟಿವಿಯಲ್ಲಿ ಯೋಧ ವಿಠಲ್ ಹಾಗೂ ಅವರ ಕುಟುಂಬಕ್ಕೆ ಊರಿನವರು ಬಹಿಷ್ಕರಿಸಿ, ಯೋಧ ಹಾಗೂ ಅವರ ಅಣ್ಣನ ಮದುವೆ ಮಾಡಿಸಲು ಪುರೋಹಿತರು ಮುಂದೆ ಬರುತ್ತಿಲ್ಲ ಎಂಬ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕರುನಾಡು ಮಿಡಿದಿದೆ. ಯೋಧನ ಮದುವೆ ನಾವು ಮಾಡಿಸ್ತೀವಿ. ನೂರು ಜನ ಪುರೋಹಿತರನ್ನು ಕರೆಸ್ತೀವಿ ಎಂದು ರಾಜ್ಯದ ಪುರೋಹಿತರು ಮುಂದೆ ಬಂದಿದ್ದಾರೆ.
Advertisement
ಪಬ್ಲಿಕ್ ಟಿವಿಗೆ ಕರೆ ಮಾಡಿ ಯೋಧನ ಮದುವೆಯನ್ನು ನಾವೇ ಉಚಿತವಾಗಿ ಮಾಡಿಕೊಡುತ್ತೇವೆ. ನೂರು ಜನ ಪುರೋಹಿತರನ್ನು ನಾವು ಕರೆಸಿ ಮದುವೆ ಮಾಡುತ್ತೇವೆ ಎಂದು ಪುರೋಹಿತ ಸಂಘದ ಸದಸ್ಯ ತೇಜಸ್ ಅವರು ಹೇಳಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್:
ಯೋಧನ ಕುಟುಂಬವನ್ನು ಬಹಿಷ್ಕರಿಸಿ ದ್ವೇಷ ಕಾರುತ್ತಿರುವ ಗ್ರಾಮಕ್ಕೆ ರಾಮದುರ್ಗ ತಹಶೀಲ್ದಾರ್ ಗಿರೀಶ್ ಸ್ವಾಧಿ ಭೇಟಿ ನೀಡಿದ್ದಾರೆ. ಗ್ರಾಮಸ್ಥರಿಂದ ನೊಂದಿರುವ ಯೋಧ ವಿಠಲ್ ಕುಟುಂಬದವರೊಂದಿಗೆ ತಹಶೀಲ್ದಾರ್ ಮಾತುಕತೆ ನಡೆಸಿದ್ದಾರೆ.
ಏನಿದು ಸುದ್ದಿ?
ಬೆಳಗಾವಿಯ ರಾಮದುರ್ಗದ ತೋಟಗಿಟ್ಟಿ ಗ್ರಾಮಸ್ಥರು ಯೋಧ ವಿಠಲ್ ಕಡಕೋಳ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಹೀಗಾಗಿ ಈ ಕುಟುಂಬದ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ ಐದು ಸಾವಿರ ದಂಡ ವಿಧಿಸಲಾಗುತ್ತೆ. ಜೊತೆಗೆ ಯೋಧನ ಕುಟುಂಬಕ್ಕೆ ಯಾರೋಬ್ಬರ ಮನೆಯಲ್ಲೂ ನೀರು ಸಿಗಲ್ಲ, ಊರಿನ ಜಾತ್ರೆ, ದೇಗುಲಕ್ಕೆ ಕೂಡ ಯೋಧನ ಕುಟುಂಬದವರಿಗೆ ಪ್ರವೇಶ ನಿಷೇಧಿಸಲಾಗಿದೆ.
ಒಂದು ಜಾಗದ ವಿಚಾರಕ್ಕೆ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ದುಡಿಯುವ ಯೋಧ ವಿಠಲ್ ಹಾಗೂ ಅವರ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ವಿಠಲ್ ಅವರ ತಂದೆಗೆ ಸೇರಿದ ಜಾಗವನ್ನು ಕಬಳಿಸಿ, ಅಲ್ಲಿ ಅಂಗನವಾಡಿ ನಿರ್ಮಿಸೋಕೆ ಕೆಲ ಊರಿನ ಮುಖಂಡರು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದನ್ನೇ ದೊಡ್ಡದು ಮಾಡಿಕೊಂಡ ಊರವರು ಇದೊಂದು ಯೋಧನ ಕುಟುಂಬ ಎನ್ನುವ ಗೌರವ ಮರೆತು, ಕನಿಷ್ಠ ಪಕ್ಷ ಮಾನವೀಯತೆಯನ್ನು ಮರೆತು ಕಳೆದ ಮೂರು ವರ್ಷದಿಂದ ಈ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.
ಅಷ್ಟೇ ಅಲ್ಲದೇ ಈಗ ವಿಠಲ್ ಹಾಗೂ ಅವರ ಅಣ್ಣನಿಗೆ ಮುಂದಿನ ತಿಂಗಳು ಮದುವೆ ನಿಗದಿ ಆಗಿದೆ. ಮದುವೆ ಶಾಸ್ತ್ರಕ್ಕೆ ಈ ಊರಿನ ಪೂಜಾರಿಯನ್ನೇ ಕರೆಯಬೇಕು ಎನ್ನುವುದು ಇಲ್ಲಿನ ಸಂಪ್ರದಾಯ. ಅವರನ್ನು ಬಿಟ್ಟು ಯಾರನ್ನೂ ಕರೆಯುವಂತಿಲ್ಲ. ಆ ಪೂಜಾರಿ ಬಾರದೇ ಇದ್ದರೆ ಮದುವೆ ಸಂಪ್ರದಾಯ ನಡೆಯೋದು ಕಷ್ಟ. ಆದರೆ ಗ್ರಾಮಸ್ಥರು ಈ ಕುಟುಂಬದ ಮೇಲೆ ಎಷ್ಟರ ಮಟ್ಟಿಗೆ ದ್ವೇಷ ಸಾಧಿಸುತ್ತಿದ್ದಾರೆ ಎಂದರೆ ಯೋಧನ ಮದುವೆ ಮಾಡಿಸೋಕೆ ಪೂಜಾರಿಗೂ ದಿಗ್ಭಂಧನ ಹಾಕಿದ್ದಾರೆ. ಯೋಧನ ಮದ್ವೆಗೆ ನಾನು ಬರೋದೇ ಇಲ್ಲ, ಇದು ದೈವ ನಿರ್ಣಯ ನಾನು ಮದುವೆ ಮಾಡಿಸಲ್ಲ ಅಂತ ಪೂಜಾರಿ ಹಠ ಹಿಡಿದು ಕುಳಿತಿದ್ದಾರೆ. ಅಯ್ಯೋ ಇಡೀ ಊರವರು ಬೇಡ ಅಂತಾರೆ ನಾನ್ಯಾಕೆ ಊರವರನ್ನು ಎದುರು ಹಾಕಿಕೊಂಡು ಬಾಳಲಿ ಎಂದು ಪೂಜಾರಿ ಹೇಳುತ್ತಿದ್ದಾರೆ.