ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಟೊಮೆಟೊದಿಂದ ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಟೊಮೆಟೊ ಬೆಲೆ ಕುಸಿತದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಲೆ ಕುಸಿತದಿಂದ ಕಂಗಾಲಾದ ರೈತರು ಟೊಮೆಟೊ (Tomato) ಬೆಳೆಯನ್ನು ಕಟಾವು ಮಾಡದೇ ಹೊಲದಲ್ಲೇ ಬಿಟ್ಟಿದ್ದಾರೆ.
ಚಿತ್ರದುರ್ಗ ತಾಲೂಕಿನ ಸಜ್ಜನಕೆರೆ ಗ್ರಾಮದ ರೈತರು ಯಾವುದೇ ಬೆಳೆ ಬೆಳೆದರೂ ಒಂದಲ್ಲ, ಒಂದು ರೀತಿಯಲ್ಲಿ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಈ ಬಾರಿ ಟೊಮೆಟೊ ಬೆಳೆದು ಅಪಾರ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ನಿರೀಕ್ಷೆಯಂತೆ ಉತ್ತಮ ಇಳುವರಿ ಬಂದರೂ ಕೂಡ ಟೊಮೆಟೊ ಬೆಲೆ ಕುಸಿತದಿಂದಾಗಿ ಮತ್ತೆ ಅನ್ನದಾತರು ಸಾಲ ಶೂಲಕ್ಕೆ ಸಿಲುಕುವಂತಾಗಿದೆ. 25 ಕೆ.ಜಿಯ ಟೊಮೆಟೊ ಬಾಕ್ಸ್‌ಗೆ ಕೇವಲ 20 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಸಾಗಾಣೆ ವೆಚ್ಚ ಹಾಗೂ ಕೂಲಿಯ ಹಣವೂ ರೈತರ ಕೈಗೆ ಸಿಗುತ್ತಿಲ್ಲ. ಹೀಗಾಗಿ ಟೊಮೆಟೊವನ್ನು ಕಟಾವು ಮಾಡದೇ ಗಿಡದಲ್ಲೇ ಬಿಟ್ಟು ರೈತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕರುನಾಡಲ್ಲಿ ಮುಂದಿನ ಒಂದು ವಾರ ಮಳೆ ಮುನ್ಸೂಚನೆ
ಅಪಾರ ಬೆಳೆ ಬೆಳೆದು, ಉತ್ತಮ ಇಳುವರಿ ಬಂದರೂ ಕೂಡ ತಕ್ಕ ಬೆಲೆ ಸಿಗಲಾರದೇ ಕೋಟೆನಾಡಿನ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಇವರತ್ತ ಸುಳಿದಿಲ್ಲ. ರೈತರ ಸಂಕಷ್ಟ ಆಲಿಸಿಲ್ಲವೆಂದು ರೈತರು ಅಸಮಾಧಾನ ಹೊರಹಾಕಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಬಂತು 10ಜಿ – ಜಸ್ಟ್ 1 ನಿಮಿಷದಲ್ಲಿ 2 ಗಂಟೆ ಫಿಲ್ಮ್ ಡೌನ್‌ಲೋಡ್