ಬೆಂಗಳೂರು: ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದಿಲ್ಲ ಎಂದು ಸಿಎಜಿ ಸಲ್ಲಿಸಿರುವ ವರದಿಯ 35 ಸಾವಿರ ಕೋಟಿ ರೂ. ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ವಾಗ್ದಾಳಿ ನಡೆಸಿದ್ದು, ಕಾನೂನು ಗೊತ್ತಿದ್ದವರೇ ಈ ರೀತಿಯಲ್ಲಿ ಹೇಳಿಕೆ ನೀಡಿದರೆ ಸಾಮಾನ್ಯ ಅಪರಾಧಿ ಯಾವ ರೀತಿ ಕಾನೂನಿಗೆ ಗೌರವ ಕೊಡಬಹುದು ಎಂದು ಪ್ರಶ್ನೆ ಮಾಡುವ ಮೂಲಕ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್‍ವೈ, ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಟೀಕೆ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಇದು ವಾಡಿಕೆ ಆಗಿದೆ. ನಿಮ್ಮ ಪಕ್ಷದವರ ಮೇಲೆ ಆಪಾದನೆ ಬಂದರೆ, ನನ್ನ ಕಡೆ ಬೊಟ್ಟು ಮಾಡಿ ತೋರಿಸುವುದು. 35,000 ಸಾವಿರ ಕೋಟಿಗಳಿಗೆ ಲೆಕ್ಕಪತ್ರವಿಲ್ಲ ಎಂದು ಸಿಎಜಿ ವರದಿ ನೀಡಿದೆ. ಆದರೆ ನಾವೇನು ಜೈಲಿಗೆ ಹೋಗಿಲ್ಲ ಎಂದು ಮಾಜಿ ಸಿಎಂ ಉತ್ತರ ಕೊಡುತ್ತಾರೆ. ಕಾನೂನು ಓದಿದವರೇ ಈ ರೀತಿ ಅಸಂಬದ್ಧ ಹೇಳಿಕೆ ನೀಡಿದರೆ, ಇನ್ನು ಸಾಮಾನ್ಯ ಅಪರಾಧಿ ಏನು ಹೇಳುತ್ತಾನೆ. ಅವರು ಈ ನೆಲದ ಕಾನೂನಿಗೆ ಏಕೆ ಗೌರವ ಕೊಡುತ್ತಾರೆ ಎಂದು ಪ್ರಶ್ನೆ ಮಾಡಿ ಟೀಕೆ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಿಂದ 35 ಸಾವಿರ ಕೋಟಿ ರೂ. ಅವ್ಯವಹಾರ: ಬಿಜೆಪಿಯಿಂದ ಸಿಎಜಿ ವರದಿ ಆಧರಿಸಿ ಆರೋಪ
ಇದೇ ವೇಳೆ ಮಂಡ್ಯದಲ್ಲಿ ಭತ್ತ ಕಟಾವು ಕಾರ್ಯದಲ್ಲಿ ಸಿಎಂ ಭಾಗಿಯಾಗಿಯಾಗುವ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿಎಂ ಧೋರಣೆಯನ್ನು ನೋಡಿದರೆ ಉತ್ತರ ಕರ್ನಾಟಕ ಬಗ್ಗೆ ಮಲತಾಯಿ ಧೋರಣೆಯನ್ನು ತೋರಿಸುತ್ತದೆ. ಅದ್ದರಿಂದ ಸಿಎಂ ಅಸಡ್ಡೆ ಬಗ್ಗೆ ಹೆಚ್ಚು ಚರ್ಚಿಸುವುದು ಅನಗತ್ಯವಾಗಿದೆ. ರಾಜ್ಯಕ್ಕೆ ಸಿಎಂ ಆಗಿರುವವರು ತಾಯಿಯ ಸ್ಥಾನದಲ್ಲಿ ಇರಬೇಕೇ ಹೊರತು ಮಲತಾಯಿ ಸ್ಥಾನದಲ್ಲಿ ಇರಬಾರದು ಎಂದು ತಿರುಗೇಟು ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಬಹಳಷ್ಟು ತಾಲೂಕುಗಳು ಬರದಿಂದ ತತ್ತರಿಸಿವೆ. ಜನರಿಗೆ ಕುಡಿಯಲು ನೀರು ಇಲ್ಲ. ಆದರೆ ಸಿಎಂ ಆಗಲಿ ಸಂಪುಟದ ಮಂತ್ರಿಗಳಾಗಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಜನರ ಸಂಕಷ್ಟಗಳನ್ನು ಅರಿಯಲು ಪ್ರಯತ್ನಿಸುತ್ತಿಲ್ಲ ಎಂದು ಟೀಕೆ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv