ಬೆಂಗಳೂರು: ಡಿಸೆಂಬರ್ 9ರ ಬಳಿಕ ಗುಡ್‍ನ್ಯೂಸ್ ನೀಡುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೈತ್ರಿಯ ಸುಳಿವು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ. ಇತ್ತೀಚೆಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಅಧಿಕಾರದ ದುರುಪಯೋಗ ನಡೆದಿದೆ. ಪ್ರತಿಯೊಂದು ಚುನಾವಣೆಗಳಲ್ಲಿ ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ಅಭ್ಯರ್ಥಿಗಳಿಗೆ ಹೆದರಿಸಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಹೋಗಿರುವ ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಸೋಲುತ್ತಾರೆ. ಅನರ್ಹರಿಗೆ ರಾಜ್ಯದ ಜನರು ಬುದ್ಧಿ ಕಲಿಸಲಿದ್ದಾರೆ. ಎನ್‍ಸಿಪಿ ಮತ್ತು ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿ ಸ್ಪರ್ಧೆ ಮಾಡಿದ್ದ ಶೇ.79ರಷ್ಟು ಅಭ್ಯರ್ಥಿಗಳು ಸೋತಿದ್ದಾರೆ. ಮಹಾರಾಷ್ಟ್ರದಲ್ಲಿ ಆದಂತೆ ಇಲ್ಲಿಯೂ ಪಕ್ಷಾಂತರಿಗಳಿಗೆ ಜನರು ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಉಪಚುನಾವಣೆ ಕರ್ನಾಟಕಕ್ಕೆ ಮಾತ್ರವಲ್ಲ, ಬೇರೆ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ. ಕ್ಷುಲ್ಲಕ ಕಾರಣಗಳಿಗಾಗಿ ಪಕ್ಷ ಬಿಟ್ಟು ಹೋಗಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹೆಚ್ಚಿನ ಕೆಲಸ ಪಡೆದವರೇ ಈ ರೀತಿ ಕೆಲಸ ಆಗಿಲ್ಲ ಅಂತಾ ಮಾತನಾಡಿ ಹೋಗಿದ್ದಾರೆ. ಅದಕ್ಕೆ ಏನ್ ಹೇಳಬೇಕು ಹೇಳಿ. ನಾನು ಕೂಡ ಇನ್ನೆರಡ್ಮೂರು ದಿನ ಪ್ರಚಾರ ಮಾಡ್ತೀನಿ, ಸತ್ಯವನ್ನ ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಪ್ರಶ್ನಿಸಿದಾಗ ಡಿಸೆಂಬರ್ 9ರವರೆಗೂ ತಾಳ್ಮೆಯಿಂದಿರಿ. ನಂತರ ಗುಡ್‍ನ್ಯೂಸ್ ನೀಡುತ್ತೇವೆ. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಪ್ರಚಾರ ವಿಚಾರದ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಮುಂದೆ ಸಿಎಂ ಯಾರು? ನಾಯಕತ್ವದ ಜವಾಬ್ದಾರಿ ಯಾರು ತೆಗೆದುಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ. ಈಗ ಕಾಂಗ್ರೆಸ್ ರಿಯಾಲಿಟಿ ಬಗ್ಗೆ ಮಾತ್ರ ಯೋಚನೆ ಮಾಡುತ್ತಿದೆ. ಪ್ರತಿ ಸಾರಿ ನಾನು ಸಿಎಂ, ಎಐಸಿಸಿ ಅಧ್ಯಕ್ಷ ಎಂದು ಹೇಳಿಯೇ ನನ್ನ ಹೀಗೆ ಮಾಡಿ ಕೂರಿಸಿದ್ದೀರಾ ಎಂದು ಖರ್ಗೆ ಹಾಸ್ಯ ಚಟಾಕಿ ಹಾರಿಸಿದರು.
ಹಣ ಬಲದ ಮೇಲೆ ಬಿಜೆಪಿ ಚುನಾವಣೆ ಗೆಲ್ಲುವ ಪ್ರಯತ್ನ ಸಾಕಷ್ಟು ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಇಂತಹ ಪ್ರಯತ್ನಗಳಲ್ಲಿ ಕೆಲವು ಸಹ ಯಶಸ್ವಿಯಾಗಿದ್ದಾರೆ. ಹಣ ನಡೆಯಲಿಲ್ಲ ಅಂದ್ರೆ ಧರ್ಮ ಜಾತಿ ಮಾತುಗಳನ್ನಾಡಿ ಜನರನ್ನ ಭಾವುಕರನ್ನಾಗಿ ಮಾಡಿ ಸಿಂಪಥಿ ಮೂಲಕ ಮತ ಪಡೆಯಲು ಮುಂದಾಗುತ್ತಾರೆ. ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಹಣದ ಹೊಳೆ ಹರಿಯುತ್ತೆ ಎಂದು ಬಿಜೆಪಿಯವರು ಪ್ರಚಾರ ಮಾಡಿದರು. ನೆರೆ ಹಾನಿಗೆ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಪ್ರಧಾನಿಗಳಾದ ಮೋದಿ ಅವರು ಕರ್ನಾಟಕಕ್ಕೇ ಬರಲಿಲ್ಲ. ಕರ್ನಾಟಕವನ್ನು ಮೂಸಿಯೂ ನೋಡಲಿಲ್ಲ. ಪ್ರಧಾನಿಗಳು ಯಡಿಯೂರಪ್ಪರ ಮೇಲಿನ ಸಿಟ್ಟನ್ನು ಕರ್ನಾಟಕದ ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಪ್ರವಾಹಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಹಣ ತರಲು ರಾಜ್ಯದ ಬಿಜೆಪಿ ನಾಯಕರು ಪ್ರಯತ್ನಿಸಲಿಲ್ಲ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಬರೀ ಸರ್ಕಾರವನ್ನ ಹೇಗೆ ಉಳಿಸಿಕೊಳ್ಳಬೇಕು ಅನ್ನೋದ್ರಲ್ಲೇ ತೊಡಗಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಉಳಿಸುವುದಕ್ಕೋಸ್ಕರ ಮೈತ್ರಿ ಪಕ್ಷಗಳ ಜತೆ ಮಾತುಕತೆಗೆ ಸಿದ್ಧವಾಗಿದ್ದೇವೆ. ಮಹಾರಾಷ್ಟ್ರದಲ್ಲಿ ಎನ್‍ಸಿಪಿ, ಕಾಂಗ್ರೆಸ್, ಶಿವಸೇನೆ ಹೊಂದಾಣಿಕೆಗೆ ನಮ್ಮ ಅಧ್ಯಕ್ಷರಿಗೆ ಇಷ್ಟ ಇರಲಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಾಗಿ ಹೇಳಿದ್ದರು. ಆದರೆ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕೆಂದು ಬಹುತೇಕ ಪಕ್ಷಗಳು ಮನವಿ ಮಾಡಿದ್ದವು. ಸಂವಿಧಾನ ಉಳಿವಿವಾಗಿ ಯುಪಿಎ ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಹೋಗುತ್ತೇವೆ ಎಂದು ತಿಳಿಸಿದರು.