ರಾಷ್ಟ್ರಪತಿ ಚುನಾವಣೆಗೆ ಕ್ಷಣಗಣನೆ ಆರಂಭ-ಮೈತ್ರಿ ರಾಜಕೀಯದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ

Public TV
3 Min Read
president

ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ದೇಶದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ರಾಷ್ಟ್ರಪತಿ ಚುನಾವಣೆಗೆ ಕ್ಷಣಗಣಗೆ ಆರಂಭವಾಗಿದೆ. ಇಂದು 10 ಗಂಟೆಯಿಂದ ಚುನಾವಣಾ ಮತದಾನ ಪ್ರಕ್ರಿಯೆ ನಡೆಯಲಿದೆ. ದಲಿತ ವರ್ಸಸ್ ದಲಿತ ಫೈಟ್ ಜೋರಾಗಿದ್ದು, ಅಡ್ಡ ಮತದಾನವಾಗುವ ಭೀತಿಯಲ್ಲಿ ಪಕ್ಷಗಳಿವೆ. ಹೀಗಾಗಿ ತನ್ನ ಸದಸ್ಯರಿಗೆ ತಮ್ಮ ಅಭ್ಯರ್ಥಿಗಳಿಗೆ ಮತದಾನ ಮಾಡುವಂತೆ ಸಭೆ ಕರೆದು ಮನವಿ ಮಾಡಿದ್ದಾರೆ.

ಇಂದಿನಿಂದ ಆರಂಭವಾಗುವ ಮಳೆಗಾಲದ ಅಧಿವೇಶನದಲ್ಲಿ ನೂತನ ಪ್ರಥಮ ಪ್ರಜೆಗೆ ಮತದಾನ ನಡೆಯಲಿದೆ. ಎನ್‍ಡಿಎ ಮಿತ್ರಕೂಟದಿಂದ ರಾಮನಾಥ್ ಕೋವಿಂದ್ ಹಾಗೂ ಯುಪಿಎ ಒಕ್ಕೂಟದಿಂದ ಮೀರಾ ಕುಮಾರ್ ಪ್ರಬಲ ಅಭ್ಯರ್ಥಿಗಳಾಗಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ದಲಿತರಾಗಿದ್ದು, ಈ ಬಾರಿಯ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ.

ಸಂಸದರು ಸಂಸತ್ ನಲ್ಲಿ ಹಾಗೂ ವಿಧಾನಸಭೆ ಸದಸ್ಯರು ಆಯಾ ರಾಜ್ಯದ ವಿಧಾನಸಭೆಯಲ್ಲಿ ಮತದಾನ ಮಾಡಲಾಗುತ್ತಿತ್ತು. ಈ ವರ್ಷ ಸಂಸದರು ಆಯಾ ರಾಜ್ಯದ ವಿಧಾನಸಭೆಯಲ್ಲಿ ಮತದಾನಕ್ಕೆ ಅವಕಾಶ ಕೇಳಿದ್ದು, ಆಯೋಗ ಕೂಡಾ ಒಪ್ಪಿಗೆ ಸೂಚಿಸಿದೆ. ಈ ಹಿನ್ನಲೆ ಅಡ್ಡಮತದಾನದ ಭಯ ಕೂಡ ಪಕ್ಷಗಳಲ್ಲಿ ಹೆಚ್ಚಾಗಿ ಕಾಡತೊಡಗಿದೆ.

ram nath kovind modi

ಇವರು ಮತದಾರರರು: ರಾಷ್ಟ್ರಪತಿ ಚುನಾವಣೆ ಇತರೆ ಚುನಾವಣೆಗಳಿಗಿಂತ ಭಿನ್ನವಾಗಿದೆ. ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆಯನ್ನು ಎಲೆಕ್ಟ್ರೊ ಕೊರಲ್ ಅಂತಾ ಕರೆಯಲಾಗುತ್ತೆ. ಅಂದ್ರೆ ಲೋಕಸಭೆ ರಾಜ್ಯಸಭೆ ಸಂಸದರು ಮತ್ತು ಎಲ್ಲ ರಾಜ್ಯಗಳ ವಿಧಾನಸಭಾ ಸದಸ್ಯರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಡಲು ಅರ್ಹರು. ಈ ಪದ್ಧತಿಯನ್ನ ಎಲೆಕ್ಟ್ರೊ ಕಾಲೇಜ್ ಎನ್ನಲಾಗುತ್ತೆ. ಇನ್ನೊಂದು ಮುಖ್ಯಾಂಶ ಇಲ್ಲಿ ಸಂಸದ ಮತ್ತು ಮತದ ಮೌಲ್ಯ 708 ಹಾಗೂ ಪ್ರತಿಯೊಂದು ರಾಜ್ಯ ವಿಧಾನ ಸಭಾ ಸದಸ್ಯನ ಮತದ ಮೌಲ್ಯ ಆಯಾ ರಾಜ್ಯದ ಜನಸಂಖ್ಯೆ ಆಧರಿಸಿರುತ್ತೆ. ಅಂದ್ರೆ 1971ರ ಜನಸಂಖ್ಯೆ ಆಧಾರ ಮೇಲೆ ಆಯಾ ರಾಜ್ಯದ ಜನಸಂಖ್ಯೆಯನ್ನು ಪ್ರತಿ ಶಾಸಕನಿಗೂ ವಿಭಾಗಿಸಿ ಸಾವಿರದಿಂದ ಭಾಗಿಸಬೇಕು. ಆಗಾ ಬರುವ ಅಂಕಿ ಆ ರಾಜ್ಯದ ಶಾಸಕನ ಮತ ಮೌಲ್ಯವಾಗಿರುತ್ತದೆ.

MeiraKumar

ಮತದಾರರ ಸಂಖ್ಯೆ:
* ರಾಷ್ಟ್ರಪತಿ ಚುನಾವಣೆ ಒಟ್ಟು ಮತದಾರ ಸಂಖ್ಯೆ-4896
* ಇದರಲ್ಲಿ ಲೋಕಸಭೆ ಮತ್ತು ರಾಜ್ಯ ಸಭೆ ಸಂಸದರು-776
* ಎಲ್ಲ ರಾಜ್ಯಗಳ ವಿಧಾನಸಭಾ ಸದಸ್ಯರ ಸಂಖ್ಯೆ-4120

ಮತ ಲೆಕ್ಕಾಚಾರ ಹೇಗೆ?
ಪ್ರಸ್ತುತ ಈಗ ದೇಶದಲ್ಲಿ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. 1971ರ ಜನಗಣತಿಯ ಆಧರಿಸಿ ಸಂಸದರು, ಶಾಸಕರ ಮತಮೌಲ್ಯ ನಿರ್ಧಾರ ಮಾಡಲಾಗುತ್ತದೆ. ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ 1 ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ ಸಿಗುತ್ತದೆ.

ಕರ್ನಾಟಕದ ಶಾಸಕರ ಮತ ಮೌಲ್ಯ ಎಷ್ಟು?
1971ರ ಜನಗಣತಿಯ ಪ್ರಕಾರ ಕರ್ನಾಟಕದ ಜಸಂಖ್ಯೆ = 2,92,99,014.
ಕರ್ನಾಟಕದ ಶಾಸಕರ ಮತಮೌಲ್ಯ = 131
ಕರ್ನಾಟಕದ ಒಟ್ಟು ಮತ ಮೌಲ್ಯ (131*224) = 29,344

ಬೇರೆ ರಾಜ್ಯದಲ್ಲಿ ಎಷ್ಟು?
ಉತ್ತರ ಪ್ರದೇಶದ ಶಾಸಕರ ಮತಮೌಲ್ಯ 208 ಆಗಿದ್ದರೆ, ಗೋವಾ ಶಾಸಕರ ಮತಮೌಲ್ಯ 8 ಆಗಿದೆ.

ಸಂಸದರ ಮತ ಮೌಲ್ಯ ಎಷ್ಟು?
ಎಲ್ಲಾ ರಾಜ್ಯಗಳ ಶಾಸಕರ ಮತಮೌಲ್ಯವನ್ನು ಸಂಸದರ ಒಟ್ಟು ಸಂಖ್ಯೆಯಿಂದ ಭಾಗಿಸಿದಾಗ ಸಂಸದರ ಮತ ಮೌಲ್ಯ ಸಿಗುತ್ತದೆ.
ಸಂಸದರ ಮತ ಮೌಲ್ಯ : 5,49,474/776 = 708

ಈಗಾಗಲೇ ಹೆಚ್ಚು ಮತಗಳನ್ನು ಹೊಂದಿರುವ ಎನ್‍ಡಿಎ ಗೆ ಗೆಲವಿನ ನಗೆ ಬೀರಲು ಕೇವಲ 11.828 ಮತಗಳು ಮಾತ್ರಬೇಕು. ಶಿವಸೇನೆ, ಎಐಎಡಿಎಂಕೆ, ಅಕಾಲಿದಳ, ಸಿಪಿಜೆ ಸೇರಿದಂತೆ ಹದಿನಾಲ್ಕು ಮಿತ್ರ ಪಕ್ಷಗಳು ಬೆಂಬಲ ಘೋಷಿಸಿವೆ. ಯುಪಿಎ ಒಕ್ಕೂಟಕ್ಕೆ 1,47,212 ಮತಗಳು ಬೇಕಾಗಿದ್ದು ಟಿಎಂಸಿ, ಬಿಎಸ್ಪಿ, ಆರ್‍ಜೆಡಿ, ಜೆಡಿಎಸ್ ಸೇರಿದಂತೆ ಹದಿನೇಳು ಮಿತ್ರಪಕ್ಷಗಳ ಬೆಂಬಲ ನೀಡಿವೆ. ಇದರ ಜೊತೆಗೆ ಆಪ್, ಬಿಜೆಡಿ, ಟಿಎಸ್‍ಆರ್, ವೈಎಸ್‍ಆರ್ ನಿರ್ಣಾಯಕ ಸ್ಥಾನದಲ್ಲಿವೆ.

ಒಂದು ಹಂತದಲ್ಲಿ ಮೇಲ್ನೋಟಕ್ಕೆ ಎನ್‍ಡಿಎ ಸರ್ಕಾರದ ಅಭ್ಯರ್ಥಿ ರಾಮನಾಥ್ ಕೋವಿಂದ್ ಗೆ ಬೆಂಬಲ ಹೆಚ್ಚಿದ್ದು ಮತದಾನದ ವೇಳೆ ಅಚ್ಚರಿಯ ಬೆಳವಣಿಗೆ ಯಾದ್ರೆ ಯುಪಿಎ ಅಭ್ಯರ್ಥಿ ಮೀರಾಕುಮಾರ್ ಗೆಲುವನ್ನು ಅಲ್ಲಗೆಳೆಯುವಂತಿಲ್ಲ. ಒಟ್ಟಿನಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದ್ದು, ಇದೇ ಜುಲೈ 20ರಂದು ದೇಶದ ಮೊದಲ ಪ್ರಜೆ ಯಾರು ಅಂತಾ ಗೊತ್ತಾಗಲಿದೆ.

 

Share This Article
Leave a Comment

Leave a Reply

Your email address will not be published. Required fields are marked *