ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಇಂದು ಮಧ್ಯಾಹ್ನದ ಹೊತ್ತಿಗೆ ಪ್ರಕಟಗೊಳ್ಳಲಿದೆ. ಜುಲೈ 18ರಂದು ಮತದಾನ ನಡೆದಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಮತದಾನ ಎಣಿಕೆ ಕಾರ್ಯ ಆರಂಭವಾಗಲಿದೆ.
ರಾಷ್ಟ್ರಪತಿ ಹುದ್ದೆಗೆ ಎನ್‍ಡಿಎಯಿಂದ ದ್ರೌಪದಿ ಮುರ್ಮು, ವಿಪಕ್ಷಗಳಿಂದ ಯಶವಂತ್ ಸಿನ್ಹಾ ಅವರನ್ನ ಕಣಕ್ಕಿಳಿಸಲಾಗಿತ್ತು. ಲೆಕ್ಕಾಚಾರದ ಪ್ರಕಾರ ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಬಹುತೇಕ ವಿಜಯಶಾಲಿ ಆಗಲಿದ್ದಾರೆ.
ಮುರ್ಮು ಅವರಿಗೆ ಎನ್‍ಡಿಎ ಪಕ್ಷಗಳಲ್ಲದೇ, ಬಿಜೆಡಿ, ಟಿಡಿಪಿ, ವೈಎಸ್‍ಆರ್‌ಪಿ, ಜೆಡಿಎಸ್, ಬಿಎಸ್‍ಪಿ, ಅಕಾಲಿದಳ, ಶಿವಸೇನೆ, ಜೆಎಂಎಂ ಬೆಂಬಲ ನೀಡಿವೆ. ಅಲ್ಲದೇ, ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಕೆಲ ಸದಸ್ಯರಿಂದ ಅಡ್ಡಮತದಾನ ಕೂಡ ಆಗಿದೆ ಎನ್ನಲಾಗಿದೆ. ಅಲ್ಲದೆ ಬುಡಕಟ್ಟು ಜನಾಂಗದ ಮಹಿಳೆಯೊರ್ವರನ್ನ ಎನ್‍ಡಿಎ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯನ್ನಾಗಿಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್- ಇಂದು ಇಡಿ ಮುಂದೆ ಹಾಜರಾಗಲಿದ್ದಾರೆ ಸೋನಿಯಾ
ಒಡಿಶಾದ ಮಯೂರ್‍ಭಂಜ್ ಜಿಲ್ಲೆಯ ಉಪರ್‍ಬೇಡಾ ಗ್ರಾಮದಲ್ಲಿ ಸಮುದಾಯದವರು ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇಡೀ ಗ್ರಾಮವನ್ನು ಸ್ವಚ್ಛಗೊಳಿಸಿ, ಮನೆ ಮನೆಗಳನ್ನು ತಳಿರು-ತೋರಣಗಳಿಂದ ಸಿಂಗಾರ ಮಾಡಲಾಗಿದೆ. ಫಲಿತಾಂಶ ಬಳಿಕ ಸಾಂಪ್ರದಾಯಿಕ ನೃತ್ಯವೂ ನಡೆಯಲಿದೆ.
ಬುಡಕಟ್ಟು ಸಮುದಾಯದ ಮೊದಲ, ಅತಿಕಿರಿಯ ವಯಸ್ಸಿನ ಹಾಗೂ ಸ್ವಾತಂತ್ರ್ಯಾ ನಂತರ ಜನಿಸಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ಪಾತ್ರರಾಗಲಿದ್ದಾರೆ. ಇದೇ 24ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರವಧಿ ಕೊನೆಯಾಗಲಿದೆ.