ದಿಗ್ಗಜರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ ಪ್ರದಾನ

Public TV
2 Min Read
padma award 1

ನವದೆಹಲಿ: ನಟ ಮೋಹನ್‍ಲಾಲ್, ನಟ ಮತ್ತು ನೃತ್ಯ ನಿರ್ದೇಶಕ ಪ್ರಭುದೇವ ಹಾಗೂ ಗಾಯಕ, ಸಂಗೀತ ನಿರ್ದೇಶಕ ಶಂಕರ್ ಮಹಾದೇವನ್ ಸೇರಿದಂತೆ 56 ಮಂದಿ ಸಾಧಕರಿಗೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಈ ಬಾರಿ ಪದ್ಮ ಪ್ರಶಸ್ತಿಗೆ ಒಟ್ಟು 112 ಮಂದಿ ಸಾಧಕರು ಆಯ್ಕೆಯಾಗಿದ್ದರು. ಅವರಲ್ಲಿ ಇಂದು 56 ಮಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. 112 ಮಂದಿಯಲ್ಲಿ ಸಾಧಕರಲ್ಲಿ 94 ಗಣ್ಯರಿಗೆ ಪದ್ಮಶ್ರೀ, 14 ಗಣ್ಯರಿಗೆ ಪದ್ಮಭೂಷಣ, ನಾಲ್ವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪ್ರಕಟಿಸಲಾಗಿತ್ತು. ಅವರಲ್ಲಿ 21 ಮಹಿಳೆಯರು ಹಾಗೂ ಇಬ್ಬರು ತೃತೀಯ ಲಿಂಗಿ ಕೂಡ ಸೇರಿದ್ದಾರೆ.

ಸಮಾಜ ಸೇವಕಿ ಸಾಲುಮರದ ತಿಮ್ಮಕ್ಕ, ಪುರಾತತ್ವ ಶಾಸ್ತ್ರಜ್ಞೆ ಶಾರದಾ ಶ್ರೀನಿವಾಸನ್, ನಟ- ಗಾಯಕ ರಾಜೀವ ತಾರನಾಥ್, ನಟ- ನೃತ್ಯ ನಿರ್ದೇಶಕ ಪ್ರಭುದೇವ ಸೇರಿ ಐದು ಮಂದಿ ಕರ್ನಾಟಕದ ಸಾಧಕರು ಕೂಡ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಅವರಲ್ಲಿ ಇಂದು ಪ್ರಭುದೇವ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದ್ದು, ಇನ್ನುಳಿದ ಗಣ್ಯರಿಗೆ ಮಾರ್ಚ್ 16ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಸಂಗೀತ ಲೋಕದಲ್ಲಿ ತನ್ನದೆ ಚಾಪು ಮೂಡಿಸಿರುವ ಶಂಕರ್ ಮಹಾದೇವನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ, ನೃತ್ಯ ಮತ್ತು ನಟನೆಯಲ್ಲಿ ಹೆಸರು ಮಾಡಿರುವ, ಭಾರತದ ಮೈಕಲ್ ಜ್ಯಾಕ್ಸನ್ ಎಂದೇ ಪ್ರಸಿದ್ಧಿಯಾಗಿರುವ ಪ್ರಭುದೇವ ಅವರಿಗೂ ಕೂಡ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಮಾಲಿವುಡ್‍ನ ಖ್ಯಾತ ನಟ ಮೋಹನ್‍ಲಾಲ್ ಅವರಿಗೆ ಭಾರತದ ಮೂರನೇಯ ಉನ್ನತ ಪ್ರಜೆ ಪ್ರಶಸ್ತಿಯಾದ ಪದ್ಮಭೂಷಣ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ನಟ ಕೇದಾರ್ ಖಾನ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಬಗ್ಗೆ ಮೋಹನ್‍ಲಾಲ್ ಅವರು ಪ್ರತಿಕ್ರಿಯಿಸಿ, ಇಂತಹ ಗೌರವಾನ್ವಿತ ಪ್ರಶಸ್ತಿಯನ್ನು ಪಡೆಯಲು ನಿಜಕ್ಕೂ ಹೆಮ್ಮೆಯಾಗುತ್ತಿದೆ. 41 ವರ್ಷದಿಂದ ನಾನು ಚಿತ್ರರಂಗದಲ್ಲಿ ಇದ್ದೇನೆ. ಇದರ ಎಲ್ಲಾ ಪ್ರಶಂಸೆ ನನ್ನ ಈ ಸಾಧನೆಯ ಪ್ರಯಾಣದಲ್ಲಿ ಬೆಂಬಲವಾಗಿ ನಿಂತ ನನ್ನ ಸಹೋದ್ಯೋಗಿಗಳು ಹಾಗೂ ನನ್ನ ಕುಟುಂಬಕ್ಕೆ ಸಲ್ಲಬೇಕು ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

ಪ್ರಭುದೇವ ಅವರು, ಈ ಪ್ರಶಸ್ತಿ ನಿಮ್ಮಿಂದ ನನಗೆ ಲಭಿಸಿದೆ. ಇದರ ಎಲ್ಲಾ ಪ್ರಶಂಸೆ ನಿಮಗೇ ಸಲ್ಲಬೇಕು. ಲವ್ ಯು ಆಲ್ ನಿಮ್ಮ ಅಭಿಮಾನಕ್ಕೆ ಧನ್ಯವಾದ ಎಂದು ಬರೆದು ಪದ್ಮಶ್ರೀ ಪ್ರಶಸ್ತಿಯೊಂದಿಗೆ ತಾವು ತೆಗೆಸಿಕೊಂಡ ಫೋಟೋವನ್ನು ಹಾಕಿ ಅಭಿಮಾನಿಗಳಿಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.

ಬಹುತೇಕ ನಾನು ರಚಿಸಿರುವ ಹಾಡುಗಳಿಗೆ ನನ್ನ ಸ್ನೇಹಿತರಾದ ಎಹ್ಸಾನ್ ಮತ್ತು ಲಾಯ್ ಅವರು ಕೂಡ ಶ್ರಮಿಸಿದ್ದಾರೆ. ಆದರಿಂದ ಅವರಿ ಒಬ್ಬರೂ ಕೂಡ ಈ ಪ್ರಶಸ್ತಿಗೆ ಪಾಲುದಾರರು ಎಂದು ಶಂಕರ್ ಮಹಾದೇವನ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *