ನವದೆಹಲಿ: ಸಂಸತ್‌ನಲ್ಲಿ ತೀವ್ರ ಚರ್ಚೆಗೆ ಒಳಪಟ್ಟು, ಉಭಯ ಸದನಗಳು ಅಂಗೀಕರಿಸಿದ್ದ ವಕ್ಫ್ ತಿದ್ದುಪಡಿ ಮಸೂದೆಗೆ (Waqf Amendment Bill) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಕಿತ ಹಾಕಿದ್ದಾರೆ.
ಶುಕ್ರವಾರ ಬೆಳಗ್ಗೆ ರಾಜ್ಯಸಭೆಯಲ್ಲಿ 13 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ಬಳಿಕ, ಮಸೂದೆಗೆ 128 ಸದಸ್ಯರು ಪರವಾಗಿ ಮತ್ತು 95 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. ಇದಕ್ಕೂ ಮೊದಲು, ಗುರುವಾರ ಮುಂಜಾನೆ ಲೋಕಸಭೆಯಲ್ಲಿ 288 ಸದಸ್ಯರು ಬೆಂಬಲಿಸಿದರೆ, 232 ಸದಸ್ಯರು ವಿರೋಧಿಸಿದರು. ಈ ರೀತಿಯಾಗಿ, ಎರಡೂ ಸದನಗಳಲ್ಲಿ ಬಹುಮತದೊಂದಿಗೆ ಮಸೂದೆ ಅಂಗೀಕಾರವಾಗಿ ರಾಷ್ಟ್ರಪತಿಗಳ ಒಪ್ಪಿಗೆಗೆ ರವಾನೆಯಾಗಿತ್ತು. ಪರ ವಿರೋಧಗಳ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ರಾತ್ರಿ ವಕ್ಫ್ ತಿದ್ದುಪಡಿ ಮಸೂದೆಗೆ ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿಗಳ ಅಂಕಿತ ಬೀಳುತ್ತಿದ್ದಂತೆ ವಕ್ಫ್ ತಿದ್ದುಪಡಿ ಮಸೂದೆ ಈಗ ಕಾನೂನಾಗಿದೆ. ಇದೇ ವೇಳೆ ಮುರ್ಮು ಅವರು, ಮುಸಲ್ಮಾನ್ ವಕ್ಫ್ (ಪುನರಾವರ್ತಿತ) ಮಸೂದೆ 2025ಕ್ಕೆ ಸಹ ಒಪ್ಪಿಗೆ ನೀಡಿದ್ದಾರೆ. ಇದನ್ನೂ ಓದಿ: 1996ರ ವಿಶ್ವಕಪ್ ಗೆದ್ದ ಲಂಕಾ ಕ್ರಿಕೆಟ್ ದಿಗ್ಗಜರ ಜೊತೆ ಮೋದಿ ಸಂವಾದ!
ಈ ಶಾಸನ ‘ಮುಸ್ಲಿಂ ವಿರೋಧಿ’ ಮತ್ತು ‘ಅಸಂವಿಧಾನಿಕ’ ಎಂದು ವಿರೋಧ ಪಕ್ಷಗಳು ತೀವ್ರ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿವೆ. ಈ ತಿದ್ದುಪಡಿಯು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಧಾರ್ಮಿಕ ಸ್ವಾತಂತ್ರ‍್ಯದ ಮೇಲೆ ದಾಳಿ ಮಾಡುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಈ ಆಕ್ಷೇಪಣೆಗಳು ಸಂಸತ್ತಿನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದವು. ಆದರೆ ಮಸೂದೆಯು ‘ಐತಿಹಾಸಿಕ ಸುಧಾರಣೆ’ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು. ಇದನ್ನೂ ಓದಿ: ಯಶಸ್ವಿ, ಪರಾಗ್ ಅಮೋಘ ಬ್ಯಾಟಿಂಗ್; ಪಂಜಾಬ್‌ಗೆ ರಾಯಲ್ ʻಪಂಚ್ʼ – ರಾಜಸ್ಥಾನ್‌ಗೆ 50 ರನ್‌ಗಳ ಭರ್ಜರಿ ಜಯ
ಸರ್ಕಾರದ ಅಧಿಸೂಚನೆ ಹೊರಬಿದ್ದರೆ ಕಾನೂನು ರೂಪದಲ್ಲಿ ಇದು ಜಾರಿಗೆ ಬರಲಿದೆ. ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕುಮಾರಸ್ವಾಮಿ ಮಾತಿಗೆ ಹೆದರೋ ಮಗ ನಾನಲ್ಲ – ಡಿಕೆಶಿ ಕೌಂಟರ್
ಜಂಟಿ ಸಂಸದೀಯ ಸಮಿತಿ ರಚನೆ ಸೇರಿದಂತೆ 6 ತಿಂಗಳುಗಳ ವಿಸ್ತೃತ ಚರ್ಚೆ ಹಾಗೂ ಸಮಾಲೋಚನೆಗಳ ಬಳಿಕ ಕಾಯ್ದೆಯನ್ನು ಸಂಸತ್‌ನಲ್ಲಿ ಮಂಡಿಸಲಾಗಿತ್ತು. ಹೊಸ ಕಾನೂನನ್ನು ಕಾಂಗ್ರೆಸ್, ಎಐಎಂಐಎಂ ಮತ್ತು ಆಮ್ ಆದ್ಮಿ ಪಕ್ಷ ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿಗಳ ಮೂಲಕ ಪ್ರಶ್ನಿಸಿವೆ. ಆದರೆ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆಗೆ ಸಮಯವನ್ನು ನಿಗದಿಪಡಿಸಿಲ್ಲ. ಇದನ್ನೂ ಓದಿ: ನಮ್ಮ ಭೂಮಿಯನ್ನು ಭಾರತದ ಭದ್ರತಾ ಹಿತಾಸಕ್ತಿಗೆ ವಿರುದ್ಧವಾಗಿ ಬಳಸಲು ಬಿಡಲ್ಲ: ಶ್ರೀಲಂಕಾ ಭರವಸೆ