ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ರು. ಆಪರೇಷನ್ ಸಿಂಧೂರ ಪ್ರಸ್ತಾಪಿಸಿ, ಸೈನಿಕರ ಸಾಧನೆ ಹೊಗಳಿದ್ರು.
ದಲಿತರು, ಹಿಂದುಳಿದವರು, ಆದಿವಾಸಿಗಳು ಸೇರಿದಂತೆ ಪ್ರತಿಯೊಂದು ಸಮುದಾಯದ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನ ಸ್ಮರಿಸಿದ್ದಾರೆ.

ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತಾರತಮ್ಯವಿಲ್ಲದೇ ಸಮಾನ ಹಕ್ಕುಗಳನ್ನು ನೀಡಿದೆ. ಸಾಮಾಜಿಕ ನ್ಯಾಯವು ಕೇವಲ ಘೋಷಣೆಯಾಗಬಾರದು, ಅದು ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದು ಸರ್ಕಾರದ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಬಿ-ಜಿ ರಾಮ್ ಜಿ ಕಾನೂನಿನ ಮೂಲಕ ಗ್ರಾಮೀಣ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ. ವರ್ಷದಲ್ಲಿ 125 ದಿನಗಳು ಉದ್ಯೋಗ ಸೃಷ್ಟಿಯಾಗಲಿವೆ ಎಂದಿದ್ದಾರೆ.
ಅಲ್ಲದೇ ಭಾರತವು ಶೀಘ್ರದಲ್ಲೇ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವ ಹಾದಿಯಲ್ಲಿದೆ. ಲಖ್‌ಪತಿ ದೀದಿ ಮತ್ತು ಮಹಿಳಾ ಮೀಸಲಾತಿಯಂತಹ ಕ್ರಮಗಳು ಮಹಿಳೆಯರ ಜೀವನವನ್ನ ಬದಲಿಸುತ್ತಿವೆ ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.

