-ನಾಳೆ ಶಬರಿಮಲೆಗೆ ಭೇಟಿ ನೀಡಲಿರುವ ಮುರ್ಮು
ತಿರುವನಂತಪುರಂ: ಇಂದಿನಿಂದ (ಅ.21) ನಾಲ್ಕು ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳ ಪ್ರವಾಸ ಕೈಗೊಂಡಿದ್ದಾರೆ.
ಇಂದು ಸಂಜೆ 6:20ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ತಿರುವನಂತಪುರಂಕ್ಕೆ ಆಗಮಿಸಲಿದ್ದು, ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.ಇದನ್ನೂ ಓದಿ: ದೀಪಾವಳಿ ಹಬ್ಬ | ಪಟ್ಟಕ್ಕಾಗಿ ಕೈ ಶಾಸಕರಿಂದ ಎರಡೂ ಪವರ್ ಸೆಂಟರ್ ಬ್ಯಾಲೆನ್ಸ್!
ಅ.22ರಂದು ತಿರುವನಂತಪುರದಿಂದ ಹೆಲಿಕಾಪ್ಟರ್ ಮೂಲಕ ನೀಲಕ್ಕಲ್‌ಗೆ ಆಗಮಿಸಿ ಬಳಿಕ ರಸ್ತೆ ಮಾರ್ಗದಲ್ಲಿ ಪಂಪಾಗೆ ಆಗಮಿಸಲಿದ್ದಾರೆ. ಬಳಿಕ ಪಂಪಾದಿಂದ ಗೂರ್ಖಾ ಫೋರ್ಸ್ ವಾಹನದಲ್ಲಿ ದೇವಾಲಯಕ್ಕೆ ಆಗಮಿಸಲಿದ್ದಾರೆ. ತುಲಾ ಮಾಸ ಪೂಜೆಯ ಕೊನೆಯ ದಿನದಂದು ಶಬರಿಮಲೆಗೆ ತೆರಳಿ, ಮಧ್ಯಾಹ್ನ 12:20 ರಿಂದ 1 ಗಂಟೆಯ ಅಯ್ಯಪ್ಪ ಸ್ವಾಮಿಯ ವಿಶೇಷ ದರ್ಶನ ಪಡೆದು, ಆರತಿ ನೆರವೇರಿಸಲಿದ್ದಾರೆ. ಈ ಮೂಲಕ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ ಭಾರತದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಬಳಿಕ ಅ.23ರಂದು ತಿರುವನಂತಪುರದ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ನಂತರ ವರ್ಕಲಾದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಅದೇ ದಿನ ಪಲೈನಲ್ಲಿರುವ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜುಬಿಲಿ ಸಮಾರೋಪ ಸಮಾರಂಭದಲ್ಲಿಯೂ ಭಾಗಿಯಾಗಲಿದ್ದಾರೆ. ಅ.24ರಂದು ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಬಳಿಕ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹಿಂದಿರುಗಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ Vs ಆರ್‌ಜೆಡಿ Vs ಸಿಪಿಐ Vs ಜೆಎಂಎಂ ಮಧ್ಯೆ ಬಿಹಾರದಲ್ಲಿ ಕುಸ್ತಿ