ಕಲಬುರಗಿ: ವಿಧಾನಸಭಾ ಚುನಾವಣೆ ಮುಗಿದು ತಿಂಗಳುಗಳೇ ಕಳೆದು ಹೋಗಿವೆ. ಆದರೆ ಆಳಂದ ಕ್ಷೇತ್ರದಲ್ಲಿ ಮಾತ್ರ ಹಾಲಿ, ಮಾಜಿ ಶಾಸಕರ ಕಾಮಗಾರಿಯ ಕಮಿಷನ್ ರಾಜಕೀಯ ಮುಂದುವರಿದಿದೆ. ಇದೀಗ ಅಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಬ್ರೇಕ್ ಬಿದ್ದಿದೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಆಳಂದ ಕ್ಷೇತ್ರಕ್ಕೆ ಕೋಟಿಗಟ್ಟಲೆ ಅನುದಾನ ನೀಡಿದ್ದರು. ಆದರೆ ಬದಲಾದ ರಾಜಕೀಯದಲ್ಲಿ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಕೆಲವೇ ಮತಗಳಲ್ಲಿ ಸೋಲು ಕಂಡಿದ್ದು, ಇದೀಗ ಅವರ ಅವಧಿಯಲ್ಲಿ ನಡೆದ ಕಾಮಗಾರಿಗೆ ಹಾಲಿ ಶಾಸಕ ಸುಭಾಷ್ ಗುತ್ತೇದಾರ ಬ್ರೇಕ್ ಹಾಕಿದ್ದಾರೆ. ಕಮಿಷನ್ ನೀಡಿ ಇಲ್ಲ ಅಂದರೆ ಕೆಲಸ ಬಿಡಿ ಅಂತ ಗುತ್ತಿಗೆದಾರರಿಗೆ ಹೇಳಿದ್ದಾರಂತೆ. ಹೀಗಾಗಿ 65 ಕೋಟಿ ರೂ. ಕಾಮಗಾರಿಯ ವಿವಿಧ ಕೆಲಸಗಳನ್ನು ನಿಲ್ಲಿಸಲಾಗಿದೆ ಎಂದು ಮಾಜಿ ಶಾಸಕ ಬಿ ಆರ್ ಪಾಟೀಲ್ ಅವರು ಹಾಲಿ ಶಾಸಕರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಕ್ಷೇತ್ರದಲ್ಲಿ ಪ್ರಮುಖವಾಗಿ ಮಿನಿ ವಿಧಾನಸೌಧ, ಅಮರ್ಜಾ ಡ್ಯಾಂ, ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಈ ಬಗ್ಗೆ ಶಾಸಕ ಸುಭಾಷ್ ಗುತ್ತೇದಾರ್ ಅವರನ್ನು ಕೇಳಿದರೆ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಬಿ.ಆರ್ ಪಾಟೀಲ್ ಇಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv