Connect with us

ಮುನ್ಸೂಚನೆ ಇದ್ರೂ ನಾಟಕ ನೋಡಲು ಹೋಗಿ ಕೊಲೆಯಾದ!

ಮುನ್ಸೂಚನೆ ಇದ್ರೂ ನಾಟಕ ನೋಡಲು ಹೋಗಿ ಕೊಲೆಯಾದ!

ಧಾರವಾಡ: ತನ್ನನ್ನು ಕೊಲೆ ಮಾಡುವ ಮುನ್ಸಚೂನೆ ಇದ್ದರೂ, ನಾಟಕ ನೋಡಲು ಹೋಗಿ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ. ಧಾರವಾಡ ತಾಲೂಕಿನ ಮಂಗಳವಟ್ಟಿ ಗ್ರಾಮದಲ್ಲಿ ದುಷ್ಕರ್ಮಿಗಳು ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬುಧವಾರ ನಾಟಕ ನೋಡಲು ಬಂದವನನ್ನು ಕೊಲೆ ಮಾಡಿದ್ದಾರೆ.

ಮಡಿವಾಳಪ್ಪ ಸಬರದ (45) ಕೊಲೆಯಾದ ವ್ಯಕ್ತಿ. ಮೂರು ವರ್ಷಗಳ ಹಿಂದೆ ಗ್ರಾಮದಲ್ಲಿ ಶಿವಪ್ಪ ಚಿಗರಿ ಎಂಬವರ ಕೊಲೆಯಾಗಿತ್ತು. ಅಂದು ನಡೆದ ಕೊಲೆಯಲ್ಲಿ ಮಡಿವಾಳಪ್ಪ ಸಹ ಭಾಗಿಯಾಗಿದ್ದನು ಎಂಬ ಆರೋಪ ಕೇಳಿಬಂದಿತ್ತು. ಶಿವಪ್ಪ ಕೊಲೆ ಕೇಸಿನಲ್ಲಿ 9 ಜನರ ಗುಂಪಲ್ಲಿ ಮಡಿವಾಳಪ್ಪ ಕೂಡಾ ಜೈಲು ಸೇರಿ ಹೊರ ಬಂದಿದ್ದ. ಜೈಲಿನಿಂದ ಹೊರಬಂದ ಮಡಿವಾಳಪ್ಪನ ಕೊಲೆಗೆ ಶಿವಪ್ಪ ಚಿಗರಿ ಕುಟುಂಬಸ್ಥರು ಕೊಲೆಗೆ ಸಂಚು ರೂಪಿಸಿದ್ದರು.

ಈ ಹಿನ್ನೆಲೆಯಲ್ಲಿ ಮಡಿವಾಳಪ್ಪ ಮಂಗಳವಟ್ಟಿ ಗ್ರಾಮ ತೊರೆದು ಪತ್ನಿಯ ತವರೂರು ಕರಡಿಗುಡ್ಡ ಎಂಬ ಗ್ರಾಮದಲ್ಲಿ ವಾಸವಾಗಿದ್ದರು. ಕಳೆದ ಮೂರು ವರ್ಷಗಳಲ್ಲಿ ಹಲವು ಬಾರಿ ಮಡಿವಾಳಪ್ಪನಿಗೆ ಕೊಲೆ ಮಾಡಲು ಯತ್ನಿಸಲಾಗಿತ್ತು. ಆದರೆ ಮಡಿವಾಳಪ್ಪ ಪ್ರತಿಬಾರಿಯೂ ತಪ್ಪಿಸಿಕೊಂಡಿದ್ದನು. ಬುಧವಾರ ರಾತ್ರಿ ಮಂಗಳವಟ್ಟಿ ಗ್ರಾಮದಲ್ಲಿ ಜನರೆಲ್ಲ “ರೈತರ ಬಾಳಲ್ಲಿ ರಣಹದ್ದು” ಎಂಬ ನಾಟಕವನ್ನು ಆಯೋಜನೆ ಮಾಡಿದ್ದರು. ಮಡಿವಾಳಪ್ಪ ನಾಟಕ ನೋಡಲು ಗ್ರಾಮಕ್ಕೆ ಬಂದಿದ್ದನು.

ಮಡಿವಾಳಪ್ಪ ನಾಟಕ ನೋಡಿ ಮನೆಗೆ ಹಿಂದಿರುಗುವ ವೇಳೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಆತನನ್ನ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

Advertisement
Advertisement