ನಾಡಹಬ್ಬ ದಸರಾ ಆರಂಭಕ್ಕೆ ಕೆಲವೇ ಗಂಟೆ ಬಾಕಿ – ಚಾಮುಂಡೇಶ್ವರಿ ದೇಗುಲದಲ್ಲಿ ಸಕಲ ಸಿದ್ಧತೆ

Public TV
1 Min Read
mys dasara countdown collage copy

ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇಗುಲ ಸಕಲ ರೀತಿಯಲ್ಲೂ ಸಿದ್ಧಗೊಳ್ಳುತ್ತಿದೆ. ದೇವಿಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.

ರಾಜ್ಯದ ಜನತೆ ಅತ್ಯಂತ ಕಾತುರದಿಂದ ಕಾಯುತ್ತಿದ್ದ ದಸರಾ ಹಬ್ಬಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಚಾಮುಂಡೇಶ್ವರಿ ದೇಗುಲ ಸಕಲ ರೀತಿಯಲ್ಲೂ ಸಿದ್ಧಗೊಳ್ಳುತ್ತಿದೆ. ಇಂದು ದೇವಾಲಯದ ಪ್ರಧಾನ ಅರ್ಚಕರಾದ ಶಶಿಶೇಖರ್ ದಿಕ್ಷೀತ್ ನೇತೃತ್ವದಲ್ಲಿ ದೇವಿಯನ್ನು ಶುದ್ಧಿಗೊಳಿಸಿ ಹೂವಿನ ಅಲಂಕಾರ ಮಾಡಲಾಯಿತು. ಹಾಗೇ ಉದ್ಘಾಟನಾ ಸಮಾರಂಭಕ್ಕೆ ವಿಶಾಲವಾದ ವೇದಿಕೆ ಕೂಡ ಸಿದ್ಧ ಮಾಡಲಾಗಿದೆ. ಭಕ್ತಾದಿಗಳಿಗೆ ಅಸನಾ ವ್ಯವಸ್ಥೆ ಕೂಡ ಮಾಡಲಾಗಿದೆ. ಚಾಮುಂಡೇಶ್ವರಿ ಸನ್ನಿಧಿ ತಳಿರು ತೋರಣ ಹಾಗೂ ಹೂವಿನಿಂದ ಶೃಂಗಾರಗೊಂಡಿದೆ.

mys dasara countdown 4

ಬುಧವಾರ ಬೆಳಗ್ಗೆ 7.05 ರಿಂದ 7.35 ತುಲಾ ಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಅಗ್ರ ಪೂಜೆಯನ್ನು ಸಲ್ಲಿಸುವ ಮೂಲಕ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ದಸರಾಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ, ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

ನಾಳೆಯಿಂದ ಅರಮನೆಯಲ್ಲಿ ಕೂಡ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ. ಯದುವೀರ ಜಯಚಾಮರಾಜೇಂದ್ರ ಒಡೆಯರ್ ಒಂಭತ್ತು ದಿನಗಳ ಕಾಲ ಖಾಸಗಿ ದರ್ಬಾರ್ ನಡೆಸುತ್ತಾರೆ. 11 ಗಂಟೆಗೆ ಖಾಸಗಿ ದರ್ಬಾರ್ ಪ್ರಾರಂಭವಾಗಲಿದೆ. ಒಂಭತ್ತು ದಿನಗಳ ಕಾಲ ವಿವಿಧ ರಾಜ್ಯದ ಸಾಂಸ್ಕೃತಿಕ, ನಾಡಿನ ಪರಂಪರೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಯಲಿವೆ. ಸಾಕಷ್ಟು ಸಂಖ್ಯೆಯಲ್ಲಿ ದಸರಾ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *