ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಸಿಡಿಮದ್ದಿನ ಸದ್ದು ಜೋರಾಗಿತ್ತು. ಜನರು ಮಾತ್ರವಲ್ಲದೆ ಅರಮನೆ ಆವರಣದಲ್ಲಿ ನಿಂತಿದ್ದ ಗಜಪಡೆ, ಅಶ್ವರೋಹಿದಳದ ಕುದುರೆಗಳು ಸಹ ನಿಂತಿದ್ದ ಜಾಗದಿಂದ ಚದುರಿದವು. ದಸರೆಯ ವಿಜಯದ ಸಂಕೇತವಾದ ಸಿಡಿಮದ್ದು ಕಾರ್ಯಕ್ರಮದ ಪೂರ್ವ ತಯಾರಿ ನಡೆಸಲಾಯಿತು.
ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಗಜಪಡೆಗೆ ಭಾರ ಹೊರುವ ತಾಲೀಮು ನಡೆಯುತ್ತಿದೆ. ಈ ಮಧ್ಯೆ ಇಂದು ದಸರಾ ಗಜಪಡೆಗೆ ಅರಮನೆ ಕೋಟೆ ಮಾರಮ್ಮ ದೇವಸ್ಥಾನ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಫಿರಂಗಿಗಳ ಸಿಡಿಮದ್ದು ತಾಲೀಮು ನಡೆಯಿತು. ಈ ತಾಲೀಮಿನಲ್ಲಿ ಕ್ಯಾಪ್ಟನ್ ಅರ್ಜುನ ನೇತೃತ್ವದ 12 ಆನೆಗಳು, 12 ಅಶ್ವಗಳು ಭಾಗಿಯಾಗಿತ್ತು.
Advertisement
Advertisement
ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ್ ರಾವ್ ನೇತೃತ್ವದಲ್ಲಿ 30 ಮಂದಿ ಸಿಎಆರ್ ಸಿಬ್ಬಂದಿಗಳು, ಮೂರು ಫಿರಂಗಿ ಗಾಡಿಗಳಲ್ಲಿ ಸಿಡಿಮದ್ದು ತಾಲೀಮು ನಡೆಸಿದರು. ಅಲ್ಲದೆ ಇನ್ನೂ 2 ಬಾರಿ ಈ ತಾಲೀಮು ನಡೆಯಲಿದ್ದು, ಕಳೆದ ಬಾರಿಗಿಂತ ಈ ಬಾರಿ ತಾಲೀಮು ಚೆನ್ನಾಗಿ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತರು ತಮ್ಮ ಅಭಿಪ್ರಯಾವನ್ನು ಹಂಚಿಕೊಂಡರು.
Advertisement
Advertisement
ಜಂಬೂ ಸವಾರಿ ದಿನ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆಯಲ್ಲಿ 21 ಕುಶಾಲತೋಪು ಸಿಡಿಸಲಿದ್ದು ಆ ವೇಳೆಯಲ್ಲಿ ಶಬ್ದಕ್ಕೆ ಬೆದರದಂತೆ ಆನೆಗಳು ಹಾಗೂ ಕುದುರೆಗಳಿಗೆ ಈ ತರಬೇತಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಈ ತರಬೇತಿ ನೀಡಲಾಗಿದ್ದು, ಇಂದು ನಡೆದ ಸಿಡಿಮದ್ದು ತಾಲೀಮಿನಲ್ಲಿ ದ್ರೋಣ, ಚೈತ್ರ, ಧನಂಜಯ ಹಾಗೂ ಹರ್ಷ ಆನೆಗಳು ಸ್ವಲ್ಪ ಬೆದರಿವೆ.
ಇಂದು ಮೊದಲ ಹಂತದಲ್ಲಿ 6 ಸುತ್ತುಗಳಲ್ಲಿ ಸಿಡಿಮದ್ದು ಸಿಡಿಸಿದ್ದು, ಪ್ರತಿ ಸಿಡಿತದ ಶಬ್ಧದಲ್ಲೂ ನಾಲ್ಕು ಆನೆಗಳು ಬೆದರಿದವು. ಈ ವೇಳೆಯಲ್ಲಿ ಮಾವುತರು ಬೆದರಿದ ನಾಲ್ಕು ಆನೆಗಳನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ತಾಲೀಮಿನ ವೇಳೆ ಆ ಆನೆಗಳು ಹತೋಟಿಗೆ ಬರಲಿದೆ ಎಂದು ಆನೆ ವೈದ್ಯರು ಮಾಹಿತಿ ನೀಡಿದರು.
ನಾಡ ಹಬ್ಬದ ಯಶಸ್ವಿಗಾಗಿ ಅರಮನೆ ನಗರಿಯಲ್ಲಿ ಸಕಲ ಸಿದ್ದತೆ ನಡೆಯುತ್ತಿದ್ದು, ವಿಜಯದ ಸಂಕೇತವಾಗಿ ಸಿಡಿಸುವ ಸಿಡಿಮದ್ದಿನ ತಾಲೀಮು ಕೂಡ ಇಂದು ಯಶಸ್ವಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv