ಮೊನ್ನೆಯಷ್ಟೇ ನಟಿ ಹರಿಪ್ರಿಯಾಗೆ ಮೂಗು ಚುಚ್ಚಿಸಿಕೊಂಡಿದ್ದರು. ಆ ಎಕ್ಸಿಪೀರಿಯನ್ಸ್ ಕೂಡ ಹಂಚಿಕೊಂಡಿದ್ದರು. ಸಡನ್ನಾಗಿ ಹರಿಪ್ರಿಯಾ ಮೂಗು ಚುಚ್ಚಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಸದ್ಯದಲ್ಲೇ ಹರಿಪ್ರಿಯಾ ಮದುವೆ ಆಗುತ್ತಿದ್ದು, ಮದುವೆಯ ಮುನ್ನ ಹೊಸ ಜೀವನಕ್ಕೆ ಕಾಲಿಡುತ್ತಿರುವ ಹುಡುಗನೇ ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದಾರೆ. ಆ ಹುಡುಗ ಬೇರೆ ಯಾರೂ ಅಲ್ಲ, ನಟ ವಸಿಷ್ಠ ಸಿಂಹ ಎನ್ನುವುದು ವಿಶೇಷ.
ಮೂಗು ಚುಚ್ಚಿಸಿಕೊಂಡ ವಿಡಿಯೋದಲ್ಲಿ ವಸಿಷ್ಠ ಸಿಂಹ ಕೂಡ ಇದ್ದು, ಅವರೇ ಮುಂದೆ ನಿಂತು ತನ್ನ ಹುಡುಗಿಗೆ ಮೂಗು ಚುಚ್ಚಿಸಿದ್ದಾರೆ. ವಿಡಿಯೋ ಹಂಚಿಕೊಂಡ ಸಂದರ್ಭದಲ್ಲಿ ಆ ಹುಡುಗ ಯಾರು ಎಂದು ಗೊತ್ತಾಗಿರಲಿಲ್ಲ. ಇಬ್ಬರ ಮದುವೆ ವಿಚಾರ ಹೊರಬೀಳುತ್ತಿದ್ದಂತೆಯೇ ವಿಡಿಯೋದಲ್ಲಿ ವಸಿಷ್ಠ ಇರುವುದನ್ನು ಪತ್ತೆ ಮಾಡಲಾಗಿದೆ. ಆ ವಿಡಿಯೋ ಮತ್ತೆ ಈಗ ವೈರಲ್ ಕೂಡ ಆಗಿದೆ. ಇದನ್ನೂ ಓದಿ: ಭಾರತೀಯ ಸೈನ್ಯಕ್ಕೆ ಅಪಮಾನ: ನಟಿ ರಿಚಾ ಚಡ್ಡಾ ಕ್ಷಮೆಯಾಚನೆ
ಹರಿಪ್ರಿಯಾ ಸ್ಯಾಂಡಲ್ ವುಡ್ನ ಖ್ಯಾತ ನಟ ವಸಿಷ್ಠ ಸಿಂಹ (Vasishta Simha) ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ವಸಿಷ್ಠ ಮತ್ತು ಹರಿಪ್ರಿಯಾ ಅವರದ್ದು ಲವ್ ಮ್ಯಾರೇಜ್. ಇಬ್ಬರೂ ತುಂಬಾ ಆಪ್ತರಾಗಿದ್ದಾರೆ. ಆಗಾಗ್ಗೆ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಆದರೆ ಎಲ್ಲಿಯೂ ಪ್ರೀತಿಯ ವಿಚಾರ ಬಿಟ್ಟುಕೊಟ್ಟಿರಲಿಲ್ಲ. ಮೊನ್ನೆಯಷ್ಟೇ ದುಬೈನಲ್ಲಿ ಶಾಪಿಂಗ್ ಮಾಡಿದ್ದಾರೆ. ಆದರೀಗ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ.
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇನ್ನೊಂದು ತಿಂಗಳಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಎಲ್ಲಾ ತಯಾರಿ ಕೂಡ ಮಾಡಿದ್ದಾರಂತೆ. ಅಲ್ಲದೇ ನಿಶ್ಚಿತಾರ್ಥದ ಬಳಿಕ ಅಂದರೆ ಎರಡು ತಿಂಗಳಲ್ಲಿ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಆದರೆ ಜೋಡಿ ಹಕ್ಕಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.