ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ ಜಿಲ್ಲೆಯ ಹುಣಸಗಿ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗಿದೆ. ಈ ಗ್ರಾಮದಲ್ಲಿ ವೃದ್ಧೆ ಹಾಗೂ ಗರ್ಭಿಣಿ ಚಿಕಿತ್ಸೆಗಾಗಿ ಹೊರ ಬರಲಾಗದೆ ನರಳಾಡುತ್ತಿದ್ದಾರೆ.
ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗಿದ್ದು, ಕೃಷ್ಣಾ ನದಿ ಪ್ರವಾಹಕ್ಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ. ಈ ಹಿನ್ನೆಲೆ ಗ್ರಾಮದಿಂದ ಹೊರಬಾರದ ಸ್ಥಿತಿಯಲ್ಲಿ ಅಲ್ಲಿನ ಜನರಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರೆಳಲು ಮಾರ್ಗವಿಲ್ಲದೆ ವೃದ್ಧರು ಹಾಗೂ ಗರ್ಭಿಣಿ ನರಳಾಡುತ್ತಿದ್ದಾರೆ. ನೀಲಕಂಠರಾಯನ ಗಡ್ಡಿಯ ನಿವಾಸಿ ಬಸಮ್ಮ(80) ಮತ್ತು ಗರ್ಭಿಣಿ ಹನುಮಂತಮ್ಮ ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ನಮ್ಮ ಸಹಾಯಕ್ಕೆ ಯಾರೂ ಕೂಡ ಬರುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಇತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳು ಜಲಾವೃತಗೊಂಡು ಜನರು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಪ್ರವಾಹ, ಇನ್ನೊಂದೆಡೆ ತಿನ್ನಲು ಸರಿಯಾಗಿ ಆಹಾರ ಸಿಗದೆ ಕಂಗಾಲಾಗಿದ್ದಾರೆ. ಹಾಗೆಯೇ ರೈತರು ತಮ್ಮ ಜಮೀನು, ಬೆಳೆಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಜನರ ಸಂಕಷ್ಟಕ್ಕೆ ನೆರವಾಗಬೇಕಿದೆ.