– ಚಪ್ಪಲಿಯಿಂದ ತುಂಬು ಗರ್ಭಿಣಿ ಮೇಲೆ ಹಲ್ಲೆ
ರಾಂಚಿ: ಕೊರೊನಾ ಹರಡಿಸುತ್ತಾಳೆ ಎಂದು ಆರೋಪಿಸಿ ರಕ್ತಸ್ರಾವವಾಗಿ ನೆಲದ ಮೇಲೆ ಬಿದ್ದ ರಕ್ತವನ್ನು ಗರ್ಭಿಣಿಯ ಕೈಯಲ್ಲೇ ಕ್ಲೀನ್ ಮಾಡುವಂತೆ ಆಸ್ಪತ್ರೆ ಸಿಬ್ಬಂದಿ ಒತ್ತಾಯಿಸಿದ್ದಾರೆ. ಪರಿಣಾಮ ಮಗು ಹೊಟ್ಟೆಯಲ್ಲೇ ಮೃತಪಟ್ಟಿರುವ ಅಮಾನವೀಯ ಘಟನೆಯೊಂದು ಜಾರ್ಖಂಡ್ ನಲ್ಲಿ ನಡೆದಿದೆ.
ಪ್ರಕರಣವು ಜಾರ್ಖಂಡ್ ಪೊಲೀಸರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜೆಮ್‍ಶೆಡ್‍ಪುರ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಈ ಸಂಬಂಧ ತನಿಖೆ ನಡೆಸುವಂತೆಯೂ ತಿಳಿಸಿದ್ದಾರೆ.
30 ವರ್ಷದ ರಿಝ್ವಾನಾ ಖತನ್ ಅವರಿಗೆ ಗುರುವಾರ ಮಧ್ಯಾಹ್ನದ ಬಳಿಕ ತೀವ್ರವಾಗಿ ರಸ್ತಸ್ರಾವವಾಗುತ್ತಿತ್ತು. ಹೀಗಾಗಿ ಕೂಡಲೇ ಮಹಿಳೆಯನ್ನು ಜೆಮ್‍ಶೆಡ್‍ಪುರದಲ್ಲಿರುವ ಮಹಾತ್ಮಾ ಗಾಂಧಿ ಮೆಮೊರಿಯಲ್ ಮೆಡಿಕಲ್ ಕಾಲೇಜ್ & ಹಾಸ್ಪಿಟಲ್(ಎಂಜಿಎಂ)ಗೆ ದಾಖಲಿಸಲಾಯಿತು. ಈ ವೇಳೆ ಅಲ್ಲಿ ತಾನು ಅನುಭವಿಸಿದ ಕಷ್ಟವನ್ನು ಮಹಿಳೆ ಪತ್ರದ ಮೂಲಕ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಗಮನಕ್ಕೆ ತಂದಿದ್ದಾರೆ.
ಪತ್ರದಲ್ಲೇನಿದೆ..?
ನಾನು ಆಸ್ಪತ್ರೆಗೆ ತೆರಳಿದಾಗ ಅಲ್ಲಿಯ ಸಿಬ್ಬಂದಿ ಧರ್ಮವನ್ನಿಟ್ಟುಕೊಂಡು ನನ್ನನ್ನು ನಿಂದಿಸಿದರು. ಅಲ್ಲದೆ ರಕ್ತಸ್ರಾವವಾಗಿ ನೆಲದಲ್ಲಿ ಬಿದ್ದಿದ್ದ ರಕ್ತವನ್ನು ನನ್ನ ಕೈಯಲ್ಲಿಯೇ ಕ್ಲೀನ್ ಮಾಡಲು ಒತ್ತಾಯಿಸಿದರು. ಆದರೆ ನಾನು ಕ್ಲೀನ್ ಮಾಡೋ ಸ್ಥಿತಿಯಲ್ಲಿ ಇರಲಿಲ್ಲ, ದೇಹ ಆಯಾಸದಿಂದ ಕೂಡಿತ್ತು. ಕೈ-ಕಾಲುಗಳು ನಡುಗಲು ಆರಂಭವಾಗಿತ್ತು. ಹೀಗಾಗಿ ಕ್ಲೀನ್ ಮಾಡಲು ನಿರಾಕರಿಸಿದಾಗ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ಕೂಡ ಮಾಡಿದ್ದು, ಹೆರಿಗೆ ಮಾಡಲು ನಿರಾಕರಿಸಿದರು. ಇದರಿಂದ ನಾನು ಶಾಕ್ ಗೆ ಒಳಗಾದೆ. ನಂತರ ಅಲ್ಲೇ ಇದ್ದ ನರ್ಸಿಂಗ್ ಹೋಂಗೆ ತೆರಳಿದೆ. ಅಲ್ಲಿ ಮಗುವಿಗೆ ಜನ್ಮ ನೀಡಿದೆಯಾದರೂ ನನ್ನ ಪುಟ್ಟ ಕಂದಮ್ಮ ಅದಾಗಲೇ ಇಹಲೋಕ ಸೇರಿಬಿಟ್ಟಿತು ಎಂದು ಮಹಿಳೆ ತನ್ನ ನೋವಿನ ಕಥೆಯನ್ನು ಪತ್ರದಲ್ಲಿ ಬಿಚ್ಚಿಟ್ಟಿದ್ದಾರೆ.
ಅಲ್ಲದೆ ಘಟನೆಗೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಮಹಿಳೆ ಆಗ್ರಹಿಸಿದ್ದು, ಇಂತಹ ಘಟನೆ ಮತ್ತೆ ಮರುಕಳಿಸಬಾರದು ಎಂದು ಅವರು ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ.