ಧಾರವಾಡ: ತೀವ್ರ ಅನಾರೋಗ್ಯ ಹಿನ್ನೆಲೆ ಬೆಳಗಾವಿಯಿಂದ (Belagavi) ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ (KIMS Hospital) ಶಿಫ್ಟ್ ಆಗಿದ್ದ ಗರ್ಭಿಣಿ (Pregnant Women) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಪತ್ನಿ ಮತ್ತು ಮಗು ಸಾವಿನಿಂದ ನೊಂದು ಪತಿ ಕೂಡ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ.
ಬೆಳಗಾವಿಯ 19 ವರ್ಷ ರಾಧಿಕಾ ಮೃತ ಗರ್ಭಿಣಿ. ಎಂಟು ತಿಂಗಳ ಗರ್ಭಿಣಿಯಾಗಿದ್ದ ರಾಧಿಕಾ, ಹೊಟ್ಟೆ ನೋವಿನಿಂದ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಬಿಮ್ಸ್‌ನಲ್ಲಿ ಸರಿಯಾದ ಚಿಕಿತ್ಸೆ ಇಲ್ಲದ ಕಾರಣ ಬೆಳಗಾವಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈ ಹೊತ್ತಿಗೆ ರಾಧಿಕಾ ಹೊಟ್ಟೆಯೊಳಗಿದ್ದ ಮಗು ಸಾವನ್ನಪ್ಪಿತ್ತು. ಹೀಗಿದ್ದರೂ ಕಳೆದ 24 ಗಂಟೆಯಿಂದ ಕಿಮ್ಸ್ ವೈದ್ಯರು ರಾಧಿಕಾ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಇಂದು (ಡಿ.31) ಬೆಳಗ್ಗೆ 11 ಗಂಟೆಗೆ ಕೊನೆಯುಸಿರೆಳೆದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ ಕೇಸ್ – ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು – 8 ಕ್ಕೇರಿದ ಸಾವಿನ ಸಂಖ್ಯೆ
ಮಗು ಮತ್ತು ಪತ್ನಿಯ ಸಾವಿನ ಸುದ್ದಿ ತಿಳಿ ಪತಿ ಮಲ್ಲೇಶಿ ಆಸ್ಪತ್ರೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ಕಿಮ್ಸ್ ವೈದ್ಯರು ಹೇಳಿದ್ದೇನು?
ಈ ಬಗ್ಗೆ ಮಾತನಾಡಿದ ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ, ಬೆಳಗಾವಿಯಿಂದ ಕಿಮ್ಸ್ ಆಸ್ಪತ್ರೆ ಬಂದಾಗಲೇ ಗರ್ಭಿಣಿ ರಾಧಿಕಾ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಬಿಪಿ, ನಾಡಿಮಿಡಿತ ಇರಲಿಲ್ಲ, ರಾಧಿಕಾ ಅವರಿಗೆ ಪ್ರಜ್ಞೆಯೇ ಇರಲಿಲ್ಲ. ಹೊಟ್ಟೆಯಲ್ಲಿ ಮಗು ಮೃತಪಟ್ಟು ಬಹಳಷ್ಟು ಸಮಯವಾಗಿತ್ತು. ಆದರೆ ನಮ್ಮ ವೈದ್ಯರು ಸಕಾಲದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರು. ರಾಧಿಕಾ ಅವರಿಗೆ ಪ್ರಜ್ಞೆ ಬಂದಾಗ ಗರ್ಭದಿಂದ ಮಗು ಹೊರ ತೆಗೆಯುವ ಆಲೋಚನೆ ಇತ್ತು. ಆದರೆ ಅವರ ಆರೋಗ್ಯ ಚೇತರಿಕೆ ಆಗಲೇ ಇಲ್ಲ. ಇಂದು ಬೆಳಗ್ಗೆ 11 ಗಂಟೆ ರಾಧಿಕಾ ಸಾವನ್ನಪ್ಪಿದ್ದಾರೆ. ಇದರಿಂದ ಮನನೊಂದು ಆಕೆ ಪತಿ ಮಲ್ಲೇಶಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದು ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಕಿಮ್ಸ್ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.