ಹೈದರಾಬಾದ್: ವರದಕ್ಷಿಣೆ ಕಿರುಕುಳದಿಂದ ಗರ್ಭಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ನಡೆದಿದೆ.
ಧನಲಕ್ಷ್ಮಿ (22) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ಶ್ರೀಕಾಕುಲಂ ಜಿಲ್ಲೆಯ ಪತಿವಾಡಪಾಲೆಮ್ ನಲ್ಲಿ ಗುರುವಾರ ಈ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳದಿಂದ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿ ಮಗಳ ಪತಿಯ ವಿರುದ್ಧ ದೂರು ನೀಡಿದ್ದಾರೆ.
ವಿಜಯನಗರ ಜಿಲ್ಲೆಯ ಮೃತ ಧನಲಕ್ಷ್ಮಿಗೆ ಉಪ್ಪಾಲಾ ಗುರುಮೂರ್ತಿ ಜೊತೆ ಏಪ್ರಿಲ್ 18 ರಂದು ಮದುವೆಯಾಗಿತ್ತು. ಆದರೆ ಮದುವೆಯಾದ ಕೆಲವು ತಿಂಗಳಲ್ಲೇ ಎರಡೂ ಕುಟುಂಬದವರಿಗೆ ವರದಕ್ಷಿಣೆ ಕುರಿತು ಜಗಳವಾಡಿದ್ದರು. ಮೃತ ಧನಲಕ್ಷ್ಮಿ ಗರ್ಭಿಣಿಯಾಗಿದ್ದರಿಂದ ದಸರಾ ಹಬ್ಬದ ಸಮಯದಲ್ಲಿ ತನ್ನ ಪೋಷಕರ ಮನೆಗೆ ಹೋಗಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ.
ಅಕ್ಟೋಬರ್ 30 ರಂದು ಗುರುಮೂರ್ತಿಯ ಅಜ್ಜಿ ನಿಧನರಾಗಿದ್ದರು. ಅಂದು ಧನಲಕ್ಷ್ಮಿ ಪತಿಯ ಮನೆಗೆ ವಾಪಸ್ ಬಂದಿದ್ದಾರೆ. ಆದರೆ ಆ ದಿನವೇ ಸುಮಾರು 6 ಗಂಟೆಗೆ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿನ ಸುದ್ದಿ ತಿಳಿದ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದು, ಬಳಿಕ ಮೃತಳ ತಂದೆ ಮುತ್ಯಾಲ ವೆಂಕಟರಮಣ ಅವರು ಜೆ.ಆರ್.ಪುರಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನ ಮಗಳಿಗೆ ಪ್ರತಿದಿನ ವರದಕ್ಷಿಣೆ ಬೇಕೆಂದು ಗುರುಮೂರ್ತಿ ಕಿರುಕುಳ ನೀಡುತ್ತಿದ್ದನು. ಆದ್ದರಿಂದ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಬಳಿಕ ಮೃತಳ ತಂದೆ ನೀಡಿದ ದೂರಿನ ಮೆರೆಗೆ ಪೊಲೀಸರು ಮೃತ ಧನಲಕ್ಷ್ಮಿ ಪತಿ ಗುರುಮೂರ್ತಿ ಸೇರಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ಮೂವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತದೇಹವನ್ನು ಆರ್‍ಐಎಮ್‍ಎಸ್ ಆಸ್ಪತ್ರೆಗೆ ರವಾನಿಸಿದ್ದು, ಪೊಲೀಸರು ಈ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv