ಕಲಹಂಡಿ: ಈ ಹಿಂದೆ ಒಡಿಶಾದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಆರೋಗ್ಯ ಸೇವೆ ವೈಫಲ್ಯವಾಗಿರುವುದರ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ಇದೀಗ ಕಾರಣಾಂತರಗಳಿಂದ ಆಂಬುಲೆನ್ಸ್ ಬರಲು ಸಾಧ್ಯವಾಗದೆ ಜೋಳಿಗೆಯಲ್ಲೇ ತುಂಬು ಗರ್ಭಿಣಿಯನ್ನು ಹೊತ್ತೊಯ್ದ ಹೃದಯವಿದ್ರಾವಕ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಈ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯ ಕನ್ಸಾಬುಂಡಲ್ ಗ್ರಾಮದಲ್ಲಿ ನಡೆದಿದೆ. ರಸ್ತೆಗೆ ಮರ ಬಿದ್ದು ರೋಡ್ ಬ್ಲಾಕ್ ಆದ ಪರಿಣಾಮ ಆಂಬುಲೆನ್ಸ್ ಬರಲು ಅಸಾಧ್ಯವಾಯಿತು. ಹೀಗಾಗಿ ಮರದ ತುಂಡಿಗೆ ಜೋಳಿಗೆ ಕಟ್ಟಿ ಅದರಲ್ಲೇ ಗರ್ಭಿಣಿಯನ್ನು 16 ಕಿ.ಮೀ ದೂರದವರೆಗೆ ಸಾಗಿಸಿದ್ದಾರೆ.
Advertisement
ವರದಿಗಳ ಪ್ರಕಾರ, ಶನಿವಾರ ಗರ್ಭಿಣಿ ಹೊಟ್ಟೆ ನೋವಿನಿಂದ ಬಳುತ್ತಿದ್ದರು. ಕೂಡಲೇ ಆಶಾ ಕಾರ್ಯಕರ್ತೆಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದು 102ಕ್ಕೆ ಕರೆ ಮಾಡಿದ್ದಾರೆ. ಆದ್ರೆ ರಸ್ತೆಗೆ ಮರ ಬಿದ್ದ ಪರಿಣಾಮ ಆಂಬುಲೆನ್ಸ್ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಗರ್ಭಿಣಿಯನ್ನು ಜೋಳಿಗೆಯಲ್ಲಿ 16 ಕಿ.ಮೀ ದೂರದವರೆಗೆ ಹೊತ್ತೊಯ್ದಿದ್ದಾರೆ. ಬಳಿಕ ಅಲ್ಲಿಂದ ಆಂಬುಲೆನ್ಸ್ ನಲ್ಲಿ ಲಂಜಿಗರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
ಸದ್ಯ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂಬುವುದಾಗಿ ವರದಿಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಇದೇ ಜಿಲ್ಲೆಯಲ್ಲಿ ಆಂಬುಲೆನ್ಸ್ ಸೂಕ್ತ ಸಮಯಕ್ಕೆ ಬಾರದೇ ಆಗ ತಾನೇ ಹುಟ್ಟಿದ ಮಗುವೊಂದು ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿತ್ತು.