ಚೆನ್ನೈ: ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್ ಬೈಕ್, ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದು, ಗರ್ಭಿಣಿ, 11 ತಿಂಗಳ ಮಗು ಸೇರಿ ಎಂಟು ಮಂದಿ ಭೀಕರವಾಗಿ ಸಾವನ್ನಪ್ಪಿರುವ ಘಟನೆ ಸೇಲಂ-ಕೊಯಮತ್ತೂರು (Selam-Coimbatore) ಹೆದ್ದಾರಿಯಲ್ಲಿ ನಡೆದಿದೆ.
ಇಂದು (ಮಾ.20) ಬೆಳಿಗ್ಗೆ 30ಕ್ಕೂ ಹೆಚ್ಚು ಜನರಿದ್ದ ತಮಿಳುನಾಡು ಸರ್ಕಾರಿ ಬಸ್ ಈರೋಡ್‌ನಿಂದ ಸೇಲಂಗೆ ಹೋಗುತ್ತಿತ್ತು. ಈ ವೇಳೆ ಉತ್ತಮಸೋಲಪುರಂ ಬಳಿ ಬಸ್‌ನ ಬ್ರೇಕ್ ಫೇಲ್ ಆಗಿ, ನಿಯಂತ್ರಣ ತಪ್ಪಿದೆ. ಪರಿಣಾಮ ಬಸ್ ಬೈಕ್ ಹಾಗೂ ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಅಮೆರಿಕದ ಫೈಟರ್ ಜೆಟ್ ಲ್ಯಾಂಡಿಂಗ್ ನಿರಾಕರಿಸಿ ನಮ್ಮದು ತಟಸ್ಥ ದೇಶ ಎಂದ ಶ್ರೀಲಂಕಾ
ಪಿಕಪ್ ವ್ಯಾನ್‌ನಲ್ಲಿ ದೇವಸ್ಥಾನದ ಉತ್ಸವದಲ್ಲಿ ಭಾಗವಹಿಸಲು ಕಲ್ಪರಪಟ್ಟಿಗೆ ತೆರಳುತ್ತಿದ್ದ ನೈಕಾರಪಟ್ಟಿಯ 11 ಜನರಿದ್ದರು. ಈ ಪೈಕಿ ನೈಕಾರಪಟ್ಟಿಯ 60 ವರ್ಷದ ಸೆಲ್ವರಾಜ್, ಅವರ ಮೊಮ್ಮಕ್ಕಳಾದ 11 ತಿಂಗಳ ಜೀವಿಕಾ ಮತ್ತು 5 ವರ್ಷದ ನಿತೀಶ್ಕಾ, ಮೂರು ತಿಂಗಳ ಗರ್ಭಿಣಿಯಾಗಿದ್ದ ಅವರ ಸೊಸೆ ಸತ್ಯ (25), ಸಂಬಂಧಿಕರಾದ ಅಮುತಾ ಮತ್ತು ಮುರುಗನ್ ಸಾವನ್ನಪ್ಪಿದ್ದಾರೆ. ವ್ಯಾನ್ ಚಲಾಯಿಸುತ್ತಿದ್ದ ಸೆಲ್ವರಾಜ್ ಅವರ ಮಗ ಮೇಘನಾಥನ್ (23) ಹಾಗೂ ಇನ್ನುಳಿದವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಬೈಕ್‌ನಲ್ಲಿ ಹೊರಟಿದ್ದ ಪುತ್ತೂರು ಬಳಿಯ ಸಂತನಕರಣಕಾಡು ನಿವಾಸಿಗಳಾದ ಎಸ್. ಮಣಿಕಂಠನ್ (21) ಮತ್ತು ತಾಯಿ ಎಸ್. ಇರುಸಾಯಿ (50) ಸಾವನ್ನಪ್ಪಿದ್ದಾರೆ. ಇಬ್ಬರು ಹತ್ತಿರದ ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಅಕ್ರಮ ತಡೆಯಲು ದೇಶಾದ್ಯಂತ 4,500 ಕಡೆ ದಾಳಿ – ಎಲ್‌ಪಿಜಿ ಉತ್ಪಾದನೆ ಶೇ.40 ರಷ್ಟು ಏರಿಕೆ: ಕೇಂದ್ರ ಸರ್ಕಾರ
ಕೊಂಡಲಂಪಟ್ಟಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸೇಲಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸೇಲಂ ಜಿಲ್ಲೆಯ ಪೆರಿಯಾ ವನವಾಸಿಯ ಅಯ್ಯಂದುರೈ (49) ಬಸ್ ಚಾಲಕನಾಗಿದ್ದು, ಅಪಘಾತ ಸಂಭವಿಸಿದ ಬಳಿಕ ಪರಾರಿಯಾಗಿದ್ದ. ಆದರೆ ಒಂದು ಗಂಟೆಯೊಳಗೆ ಬಂಧಿಸಿದ್ದಾರೆ. ಜೊತೆಗೆ ಬಸ್ ಕಂಡಕ್ಟರ್ ಬಾಲಕೃಷ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅಪಘಾತದ ಬಳಿಕ ಸೇಲಂ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಘಟನಾ ಸ್ಥಳದಲ್ಲೇ ಇದ್ದ ಪೆಟ್ರೋಲ್ ಬಂಕ್‌ನ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿದೆ.ಇದನ್ನೂ ಓದಿ: ಮಾ.28ರವರೆಗೆ 9 ಗಲ್ಫ್ ರಾಷ್ಟ್ರಗಳ ಏರ್‌ಸ್ಪೇಸ್ ಪ್ರವೇಶಿಸದಂತೆ ನಿರ್ಬಂಧ – ವಿಮಾನಯಾನ ಕಂಪನಿಗಳಿಗೆ DGCA ಸೂಚನೆ

