ತುಮಕೂರು: ಹೆಣ್ಣು ಮಗು ಜನಿಸುತ್ತದೆ ಎಂಬ ಭಯದಿಂದ ಪತಿಯ ಸಲಹೆಯ ಮೇರೆಗೆ ಗರ್ಭಪಾತದ ಮಾತ್ರೆ ಸೇವಿಸಿ ಗರ್ಭಿಣಿಯೊಬ್ಬರು ಕೊರಟಗೆರೆ ತಾಲೂಕಿನ ಕಾಮರಾಜನಹಳ್ಳಿಯಲ್ಲಿ ಮೃತಪಟ್ಟಿದ್ದಾರೆ.
ರಾಧಾಮಣಿ(25) ಮೃತಪಟ್ಟ ಗರ್ಭಿಣಿ. ರಾಮಯ್ಯ ಮತ್ತು ರಾಧಾಮಣಿ ದಂಪತಿಗೆ ಈಗಾಗಲೇ 3 ಹೆಣ್ಣು ಮಕ್ಕಳಿದ್ದು, ನಾಲ್ಕನೆಯ ಮಗುವಿಗಾಗಿ 6 ತಿಂಗಳ ಗರ್ಭವತಿಯಾಗಿದ್ದಳು.
Advertisement
ಜನಿಸಲಿರುವ ನಾಲ್ಕನೇಯ ಮಗುವು ಹೆಣ್ಣಾಗಲಿದೆ ಎನ್ನುವ ಭಯಕ್ಕೆ ಬಿದ್ದು ಗರ್ಭಪಾತದ ಮಾತ್ರೆ ಸೇವಿಸಿದ್ದಳು. ಅತಿಯಾದ ಮಾತ್ರೆಗಳ ಸೇವಿಸಿ ಅನಾರೋಗ್ಯಕ್ಕೀಡಾದ ಪರಿಣಾಮ ಶುಕ್ರವಾರ ರಾಧಾಮಣಿಯನ್ನು ಕೊರಟಗೆರೆಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಮೃತ ಮಗುವನ್ನು ಹೊರ ತೆಗೆಯುವಾಗ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಂದೇ ರಾಧಾಮಣಿ ಸಾವನ್ನಪ್ಪಿದ್ದಳು.
Advertisement
ಸಂಬಂಧಿಕರ ಆರೋಪ ಏನು?
ನಗರದ ಖಾಸಗಿ ಆಸ್ಪತ್ರೆಯ ನರ್ಸ್ ಮಂಜುಳಾ ರಾಧಾಮಣಿಗೆ ಗರ್ಭಪಾತದ ಮಾತ್ರೆಗಳನ್ನು ತೆಗದುಕೊಳ್ಳುವಂತೆ ಹೇಳಿದ್ದರು. ಬಳಿಕ ಆಸ್ಪತ್ರೆಯ ನರ್ಸ್ ಗಳು ಗರ್ಭಪಾತ ಮಾಡಿಸಿದ್ದಾರೆ. ರಾಧಾಮಣಿಯ ಹೊಟ್ಟೆಗೆ ಕೈ ಹಾಕಿ ಮೃತಪಟ್ಟ ಮಗುವನ್ನು ನರ್ಸ್ ಮಂಜುಳಾ ಹೊರಗಡೆ ತೆಗೆದಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಈ ಸಾವಿಗೆ ಪತಿ ರಾಮಯ್ಯ ಕಾರಣ ಎಂದು ಆರೋಪಿಸಿ ರಾಧಾಮಣಿ ಸಂಬಂಧಿಕರು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
Advertisement
ಆಕ್ರೋಶಗೊಂಡ ರಾಧಾಮಣಿ ಸಂಬಂಧಿಕರು ಭಾನುವಾರ ನರ್ಸ್ ಮಂಜುಳಾ ಮನೆ ಮುಂದೆ ಪ್ರತಿಭಟನೆ ನಡೆಸಿ ಬಂಧಿಸುವಂತೆ ಆಗ್ರಹಿಸಿದರು.