ಭೋಪಾಲ್: ಹೊಟ್ಟೆಯಲ್ಲೇ ಮಗು ಸತ್ತಿದೆ ಅಂತ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ ಪರಿಣಾಮ ಮಹಿಳೆಯೊಬ್ಬರು ಸ್ಥಳೀಯರ ಸಹಾಯದಿಂದ ತೆರೆದ ಜಾಗದಲ್ಲೇ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆಯೊಂದು ನಡೆದಿದೆ.
ಈ ಘಟನೆ ಸೋಮವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ನಡೆದಿದೆ. ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯೊಂದರ ಪುಟ್ಟ ಗ್ರಾಮದ ನಿವಾಸಿ ಸಮರ್ವತಿ ದೇವಿ(24) ಎಂಬ 8 ತಿಂಗಳ ಗರ್ಭಿಣಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಜಿಲ್ಲಾಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಅಲ್ಲಿನ ವೈದ್ಯರು ಮಗು ಹೊಟ್ಟೆಯಲ್ಲಿಯೇ ಪ್ರಾಣಬಿಟ್ಟಿದೆ ಅಂತ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಮಹಿಳೆ, ನಾನು ಆಸ್ಪತ್ರೆಗೆ ತೆರಳಿ ಹೊಟ್ಟೆ ನೋವಾಗುತ್ತಿದೆ ಅಂತ ಹೇಳಿದೆ. ಆದ್ರೆ ಅಲ್ಲಿನ ವೈದ್ಯರು ನನ್ನ ಸರಿಯಾಗಿ ಪರೀಕ್ಷೆ ಮಾಡದೇ ಹೊಟ್ಟೆಯಲ್ಲಿಯೇ ಮಗು ಸತ್ತಿದೆ ಅಂತ ಹೇಳಿದ್ರು. ವೈದ್ಯರ ಮಾತಿನಿಂದ ಗಾಬರಿಗೊಂಡ ನನಗೆ ಒಂದು ಬಾರಿ ದಿಕ್ಕುತೋಚದಂತಾಗಿದ್ದು, ಕೂಡಲೇ ಆಸ್ಪತ್ರೆಯಲ್ಲಿಯೇ ಜೋರಾಗಿ ಕಿರುಚಾಡಿದೆ. ಈ ವೇಳೆ ಅಲ್ಲಿನ ನರ್ಸ್ ನನ್ನ ಕೆನ್ನೆಗೆ ಹೊಡೆದರು. ಅಲ್ಲದೇ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳದೇ ಕೂಡಲೇ ಇಲ್ಲಿಂದ ತೊಲಗುವಂತೆ ಎಚ್ಚರಿಸಿದ್ದಾರೆ. ಹೀಗಾಗಿ ಬೇರೆ ದಾರಿ ಕಾಣದೇ ನಾನು ಆಸ್ಪತ್ರೆಯಿಂದ ಹೊರಬಂದೆ ಅಂತ ಆರೋಪಿಸಿದ್ದಾರೆ.
Advertisement
Advertisement
ಅಂತೆಯೇ ತನ್ನ ಸಂಬಂಧಿಕರೊಂದಿಗೆ ಮರಳಿ ಮನೆಗೆ ಹಿಂದುರುತ್ತಿದ್ದ ಸಂದರ್ಭದಲ್ಲಿ ಮತ್ತೊಮ್ಮೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಸಂಬಂಧಿಕರು ಹಾಗೂ ಕೆಲ ಮಹಿಳೆಯರ ಸಹಾಯದಿಂದ ಮಾರ್ಗ ಮಧ್ಯೆಯೇ ಮುಂಜಾನೆ 5 ಗಂಟೆ ಸುಮಾರಿಗೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಯರು ಸಾರಿ ಮತ್ತು ಹೊದಿಕೆಯಿಂದ ಗರ್ಭಿಣಿಯನ್ನು ಸುತ್ತುವರಿದ್ರು. ಉಳಿದ ಮಹಿಳೆಯರು ನೀರು ತರಲು ಸಹಾಯ ಮಾಡಿದ್ರು. ಒಟ್ಟಿನಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಆಕೆಯನ್ನು ಅದೇ ಆಸ್ಪತ್ರೆಗೆ ದಾಖಲಿಸಿ ತಾಯಿ- ಮಗುವನ್ನು ಪರೀಕ್ಷಿಸಲು ಕರೆದುಕೊಂಡು ಹೋಗಿದ್ದಾರೆ.
ಇನ್ನು ಈ ಘಟನೆಗೆ ಖಂಡನೆ ವ್ಯಕ್ತಪಡಿಸಿದ ಮುಖ್ಯ ವೈದ್ಯಾಧಿಕಾರಿ ಆರ್ ಕೆ ಮೆಹ್ರಾ ಅವರು, ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಯಿಂದ ಹೇಳಿಕೆಗಳನ್ನು ಪಡೆದುಕೊಳ್ಳುತ್ತೇವೆ. ಅಲ್ಲದೇ ಈ ಕುರಿತು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಗತ್ಯ ಬಿದ್ದರೆ ಅಂತಹ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡುತ್ತೇವೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಸದ್ಯ ಸಮರ್ವತಿ ಮತ್ತು ಮುದ್ದಾದ ಗಂಡು ಮಗು ಸಂಬಂಧಿಕರ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. ಅಲ್ಲದೇ ತನ್ನ ಗಂಡು ಮಗುವಿನೊಂದಿಗೆ ಸಮರ್ವತಿ ಕೂಡ ಸಂತೋಷದಿಂದಿದ್ದಾರೆ ಎಂಬುದಾಗಿ ವರದಿಯಾಗಿದೆ.