ಹಾಸನ: Who Is That Preetham Gowda? ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪ್ರಶ್ನೆ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಪ್ರಶ್ನೆಗೆ ಪ್ರೀತಂ ಗೌಡ (Preetham Gowda) ಉತ್ತರ ಕೊಟ್ಟಿದ್ದಾರೆ.
ಹಾಸನದಲ್ಲಿ (Hassan) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರೀತಂಗೌಡ ಯಾರು ಎಂಬ ಪ್ರಶ್ನೆಗೆ ನಮ್ಮ ನಾಯಕರು ಉತ್ತರ ಕೊಟ್ಟಿದ್ದಾರೆ. ಪ್ರೀತಂ ಗೌಡ ಓರ್ವ ಸಾಮಾನ್ಯ ಕಾರ್ಯಕರ್ತ ಅನ್ನೋದನ್ನ ಅವರ ಗಮನಕ್ಕೆ ತಂದಿದ್ದಾರೆ. ಹಾಗಾಗಿ ನಾನು ಅದರ ಬಗ್ಗೆ ಹೆಚ್ಚೇನು ಹೇಳುವುದಿಲ್ಲ ಎಂದು ಉತ್ತರಿಸಿದ್ದಾರೆ.
ಕೆಂಡಾಮಂಡಲವಾಗಿದ್ದ ಹೆಚ್‌ಡಿಕೆ:
ಹಾಸನದ ಮಾಜಿ ಶಾಸಕ ಪ್ರೀತಂಗೌಡರನ್ನು ಪಾದಯಾತ್ರೆ ಸಭೆಗೆ ಕರೆಸಿದ್ದ ಬಗ್ಗೆ ಇತ್ತೀಚೆಗೆ ಹೆಚ್‌ಡಿ ಕುಮಾರಸ್ವಾಮಿ ಮಾತನಾಡಿದ್ದರು. ದೇವೇಗೌಡರ (Devegowda) ಕುಟುಂಬಕ್ಕೆ ವಿಷ ಇಟ್ಟವನೊಂದಿಗೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ? ಯಾರದು ಪ್ರೀತಂ ಗೌಡ? ದೇವೇಗೌಡರ ಕುಟುಂಬವನ್ನು ನಾಶ ಮಾಡಲು ಹೊರಟವನನ್ನ ಸಭೆಯಲ್ಲಿ ಕೂರಿಸಿಕೊಂಡು, ನನ್ನನ್ನ ಸಭೆಗೆ ಕರೆಯುತ್ತೀರಾ? ಪೆನ್ ಡ್ರೈವ್ ಗಳನ್ನು ಹಂಚಿವರು ಯಾರು ಎಂದು ಗೊತ್ತಿಲ್ಲವೇ? ಚುನಾವಣಾ ಮೈತ್ರಿಯೇ ಬೇರೆ. ರಾಜಕೀಯವೇ ಬೇರೆ. ಸಹಿಸಿಕೊಳ್ಳೋದಕ್ಕೆ ಒಂದು ಮಿತಿಯಿದೆ ಎಂದು ಕಿಡಿಕಾರಿದ್ದರು.
ಸುದ್ದಿಗೋಷ್ಠಿಯಲ್ಲಿ ಮುಂದುವರಿದು ಮಾತನಾಡಿದ ಪ್ರೀತಂ ಗೌಡ, ಮೈತ್ರಿ ಧರ್ಮ ಪಾಲನೆ ಮಾಡುಬೇಕು ಅನ್ನೋದು ರಾಷ್ಟ್ರೀಯ, ರಾಜ್ಯ ನಾಯಕರ ಸದುದ್ದೇಶ. ಅಧಿಕಾರ ಸಮಬಲವಾಗಿ ಹಂಚಿಕೆಯಾಗಬೇಕು. ಮೈತ್ರಿ ಧರ್ಮವನ್ನು ಎಲ್ಲರೂ ಪಾಲನೆ ಮಾಡಬೇಕು. ಎಲ್ಲಾ ಸದಸ್ಯರ ಅಭಿಪ್ರಾಯದೊಂದಿಗೆ ಪಾಲನೆ ಮಾಡಬೇಕು. ಎರಡು ಪಕ್ಷಕ್ಕೆ ಬಹುಮತ ಇಲ್ಲದಿರುವುದರಿಂದ ಅಧಿಕಾರ ಹಂಚಿಕೆಯಾಗಬೇಕು. ಕಾರ್ಯಕರ್ತರ ಚುನಾವಣೆ, ವೈಯಕ್ತಿಕ ಪ್ರತಿಷ್ಠೆಗೆ ಆಸ್ಪದ ಕೊಡಬಾರದು ಎಂದು ಹೇಳಿದ್ದಾರೆ.
ಮೈತ್ರಿ ಆಗಿರುವುದು ರಾಷ್ಟ್ರೀಯ ಮಟ್ಟದಲ್ಲಿ, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಅವರಿಗೂ ಕೂಡ ಬದ್ಧತೆ ಇರಬೇಕು. ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಆಗಿರುವ ಮೈತ್ರಿ, ಇದರಲ್ಲಿ ಯಾವುದೇ ಗೊಂದಲ ಬೇಡ. ಹಾಸನ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಧರ್ಮ ಪಾಲಿಸಲಾಗುವುದು. ಅಧಿಕಾರ ಸಮಾನಾಗಿ ಹಂಚಿಕೆಯಾಗಲಿದೆ. ಹಾಸನ ನಗರಸಭೆಯಲ್ಲಿ ಮೊದಲ ಹತ್ತು ತಿಂಗಳು ಬಿಜೆಪಿ ಅಧಿಕಾರ ಕೊಡಬೇಕು ಎನ್ನುವ ಭಾವನೆ ಇದೆ. ಅದನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನಿಂದ ತಪ್ಪಾಗಬಾರದು ಅಂತ ಸಹಮತ ನೀಡುತ್ತಿದ್ದೇನೆ:
ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಕಡಿಮೆ ಮತಗಳು ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಧಾನ ಪರಿಷತ್ ಚುನಾವಣೆ ಆಯ್ತು. ವಿವೇಕಾನಂದ ಅವರು ನಮ್ಮ ಮನೆಗೆ ಭೇಟಿ ನೀಡಿ ಸಹಕಾರ ಕೇಳಿದ್ರು. ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ ದೇವೇಗೌಡರು ಫೋನ್ ಮಾಡಿದ್ರು. ನಮ್ಮ ರಾಜ್ಯಾಧ್ಯಕ್ಷರ ಸೂಚನೆಯು ಇತ್ತು. ಪ್ರಾಮಾಣಿಕವಾಗಿ ವಿವೇಕಾನಂದರ ಗೆಲುವಿಗೆ ಕೆಲಸ ಮಾಡಿದ್ರು. ಆದ್ರೆ ಇದು ಕಾರ್ಯಕರ್ತರ ಚುನಾವಣೆ, ವೈಯುಕ್ತಿಕ ಪ್ರತಿಷ್ಠಿಗೆ ಆಸ್ಪದ ಕೊಡಬಾರದು. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಧಿಕಾರ ಹಂಚಿಕೆಯಾಗಬೇಕು. ನನ್ನಿಂದ ಯಾವುದೇ ತರಹದ ತಪ್ಪುಗಳು ಆಗಬಾರದೆಂದು ಸಹಮತ ನೀಡುತ್ತಿದ್ದೇನೆ ಎಂದಿದ್ದಾರೆ.
ನನ್ನಿಂದ ಯಾವುದೇ ರೀತಿಯ ಚಿಕ್ಕ ಲೋಪವಾಗಬಾರದು. ಸಾಂದರ್ಭಿಕ ಸಮಯದಲ್ಲಿ ಕೆಲವು ಸಾಂದರ್ಭಿಕ ಮತಗಳನ್ನು ಪಡೆದು ಹಾಸನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಾಂದರ್ಭಿಕ ಮತಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಾಂದರ್ಭಿಕ ಶಾಸಕರು ವಿಫಲರಾಗಿದ್ದಾರೆ. ಅವರಿಗೆ ಯಾವ ಸಂದರ್ಭದಲ್ಲಿ ಯಾರು ವೋಟು ಹಾಕಿದ್ರು ಅಂತ ಎಲ್ಲರಿಗೂ ಗೊತ್ತಿದೆ. ಆ ವೋಟುಗಳನ್ನು ಅವರು ಹಿಡಿದು ಇಟ್ಟುಕೊಳ್ಳಬೇಕಿತ್ತು. ಸಾಂದರ್ಭಿಕ ಮತಗಳು ಗಟ್ಟಿ ಇಲ್ಲದ ಸಂದರ್ಭದಲ್ಲಿ ಬೇರೆ ಬೇರೆ ಪಕ್ಷಗಳಿಗೆ ಹೋಗುತ್ತೆ. ಸಾಂದರ್ಭಿಕ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಚುನಾಯಿತರಾದವರಿಗೆ ಅವರ ಶಕ್ತಿ ಈ ಚುನಾವಣೆಯಲ್ಲಿ ಗೊತ್ತಾಗಿದೆ. ಶಾಸಕರು 84 ಸಾವಿರ ಮತಗಳನ್ನು ಪಡೆದಿದ್ದರು. ಲೋಕಸಭಾ ಚುನಾವಣೆಯಲ್ಲಿ 68 ಸಾವಿರ ಮತಗಳು ಬಂದಿವೆ. ಮೈತ್ರಿ ಧರ್ಮ ಪಾಲನೆ ಮಾಡಿದ್ದಕ್ಕೆ 68 ಸಾವಿರ ಮತಗಳು ಬಂದಿವೆ. ಶ್ರಮಪಟ್ಟು ಮತಗಳಿಸಿರುವುದು ಗಟ್ಟಿಯಾಗಿರುತ್ತೆ. ಇದರಿಂದ ನಗರಸಭೆ ಚುನಾವಣೆಯ ಮೈತ್ರಿ ಅನಿವಾರ್ಯತೆ ಏನು ಎಂಬುದು ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ.
ಇನ್ನೂ ಪಾದಯಾತ್ರೆಯಲ್ಲಿ ಕಡಗಣನೆ ವಿಚಾರ ಕುರಿತು ಮಾತನಾಡಿ, ಪಾದಯಾತ್ರೆಯಲ್ಲಿ ಎಲ್ಲಾ ಕಡೆ ಕಾಣಿಸಿಕೊಂಡಿದೆ. ಅದಕ್ಕೆ ಸೂಕ್ತ ಸಮಯದಲ್ಲಿ ಸೂಕ್ತವಾದ ಉತ್ತರ ಸಿಗುತ್ತೆ. ನನ್ನ ರಾಜಕಾರಣ ಲಾಂಗ್ ಟರ್ಮ್. ನಮ್ಮ ಪಕ್ಷದ ಹಿರಿಯರು ಮಾರ್ಗದರ್ಶನ ಕೊಟ್ಟಿದ್ದಾರೆ. ನಮ್ಮ ಮನೆಯ ಹಿರಿಯರು ಬುದ್ಧಿ ಮಾತು ಹೇಳ್ತಾರೆ. ಅದನ್ನು ಆಶೀರ್ವಾದ ಅಂತ ತಗೋತಿನಿ. ನನ್ನದು ಬಹಳ ದೀರ್ಘವಾದ ರಾಜಕಾರಣ. ಸಾಂದರ್ಭಿಕವಾಗಿ ನಡೆಯುವ ಘಟನೆಗಳಿಗೆ, ಸಾಂದರ್ಭಿಕವಾಗಿ ದೃತಿಗೆಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.