– ಜೆಡಿಎಸ್‍ಗೆ ಕ್ಷೇತ್ರ ಬಿಡುವುದಾದರೆ ಬಿಜೆಪಿ ಕಾರ್ಯಕರ್ತರ ಒಪ್ಪಿಗೆಗೆ ಸೂಚನೆ
ಮಂಡ್ಯ: ಲೋಕಸಭಾ ಚುನಾವಣೆಗೆ (Lok Sabha Elections 2024 )ಹಾಸನ ಹಾಗೂ ಮಂಡ್ಯ (Mandya) ಎರಡು ಕ್ಷೇತ್ರಗಳು ಬಿಜೆಪಿಗೆ ಸಿಗಲಿದೆ. ಈ ಮೂಲಕ ಪ್ರತಿ ಗ್ರಾಮದಲ್ಲೂ ಬಿಜೆಪಿ ಪಕ್ಷ ಕಟ್ಟೋಣ. ಒಂದು ವೇಳೆ ಜೆಡಿಎಸ್‍ಗೆ (JDS) ಕ್ಷೇತ್ರ ಬಿಟ್ಟು ಕೊಟ್ಟರೆ, ಅಭ್ಯರ್ಥಿ ಆಯ್ಕೆಗೆ ನಮ್ಮ ಕಾರ್ಯಕರ್ತರ ಒಪ್ಪಿಗೆ ತೆಗೆದುಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರೀತಮ್‍ಗೌಡ (Preetham Gowda) ಹೇಳಿದ್ದಾರೆ.
Advertisement
Advertisement
ಪಾಂಡವಪುರದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಗೌಡರಿಗೆ ಮಂಡ್ಯದಲ್ಲೂ ನೆಂಟರಿದ್ದಾರೆ, ಹಾಸನದಲ್ಲೂ ನೆಂಟರು ಇರ್ತಾರೆ, ನಮ್ಮ ಸಂಕಲ್ಪ ಕುಟುಂಬ ರಾಜಕೀಯದ ವಿರುದ್ಧ ಇರಬೇಕು. ನೆಂಟಸ್ಥಿಕೆ ಎಲ್ಲವನ್ನೂ ಬಿಡಬೇಕು ಎಂದರು.
Advertisement
ರಾಷ್ಟ್ರ, ರಾಜ್ಯ ಸೇರಿದಂತೆ ಮಂಡ್ಯದಲ್ಲೂ ಕುಟುಂಬ ರಾಜಕೀಯ ಇದೆ. ಎಲ್ಲಾ ರಾಜ್ಯದಲ್ಲೂ ಒಂದೊಂದು ಕುಟುಂಬ ರಾಜಕೀಯ ಇದೆ. ಇನ್ನೂ ರಾಜ್ಯದ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುವುದೇ ಬೇಡ. ಅವರು ಆಯ್ತು, ಮಕ್ಕಳು ಆಯ್ತು, ಮೊಮ್ಮಕ್ಕಳು ಆಯ್ತು, ಈಗ ಮರಿ ಮಕ್ಕಳು ಎಂದು ಅವರು ವ್ಯಂಗ್ಯವಾಡಿದ್ದಾರೆ.
Advertisement
ಇದುವರೆಗೂ ನಮ್ಮನ್ನು ವಿರೋಧ ಮಾಡುತ್ತಿದ್ದ ಜೆಡಿಎಸ್ ನಮ್ಮೊಂದಿಗೆ ಮೈತ್ರಿಯಾಗಿದೆ. ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಜೆಡಿಎಸ್ ಕೈಜೋಡಿಸಿರುವುದು ಸ್ವಾಗತ. ಜೆಡಿಎಸ್ ಎನ್‍ಡಿಎ ಕೂಟಕ್ಕೆ ಸೇರಿದೆ ಅಷ್ಟೇ, ಇನ್ನೂ ಯಾವ ಕ್ಷೇತ್ರ, ಯಾವ ಪಕ್ಷಕ್ಕೆ ಎಂದು ನಿರ್ಧಾರವಾಗಿಲ್ಲ. ಮೈತ್ರಿಯಾಗಿದೆ ಟಿಕೆಟ್ ಬಿಟ್ಟುಕೊಡಬೇಕು ಎಂದು ಕಾರ್ಯಕರ್ತರು ಕುಂದುವ ಅವಶ್ಯಕತೆ ಇಲ್ಲ. ಮಂಡ್ಯ ಜಿಲ್ಲೆಯಲ್ಲಿ ಒಂದೇ ಒಂದು ಸೀಟ್ ಬಿಜೆಪಿ ಗೆದ್ದಿರಲಿಲ್ಲ. ಕೆಆರ್‌ಪೇಟೆಯಲ್ಲೂ ನಾರಾಯಣಗೌಡರು ಮೊದಲ ಬಾರಿಗೆ ಗೆದ್ದರು, ಅವರನ್ನು ಬಿಜೆಪಿ ಮಂತ್ರಿಯನ್ನಾಗಿ ಮಾಡಿತು ಎಂದಿದ್ದಾರೆ.
ಕೆರಗೋಡಿನಲ್ಲಿ ನಮ್ಮ ಆಚಾರ ವಿಚಾರಗಳನ್ನು ಕಾಂಗ್ರೆಸ್ (Congress) ವಿರೋಧ ಮಾಡಿದೆ. ಅದನ್ನು ನಮ್ಮ ಪಕ್ಷ ವಿರೋಧಿಸುವಲ್ಲಿ ಯಶಸ್ವಿಯಾಗಿದೆ. ಕೆರಗೋಡಿನ ಜನರೊಂದಿಗೆ ಬಿಜೆಪಿ ನಿಂತು ಹೋರಾಟ ಮಾಡಿದೆ. ಇದು ಜನರಲ್ಲಿ ವಿಶ್ವಾಸ ಮೂಡಿಸಿದೆ ಎಂದಿದ್ದಾರೆ.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ, ಬಿಜೆಪಿ ಪರಾಜಿತ ಅಭ್ಯರ್ಥಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು.