ಮೈಸೂರು: ಕೆಆರ್‌ಎಸ್ ಡ್ಯಾಂ ಭರ್ತಿಯಾಗಿರುವುದು ಹಾಗೂ ಇತ್ತೀಚೆಗೆ ಡ್ಯಾಂ ಬಳಿ ನಿಗೂಢ ಶಬ್ಧ ಕೇಳಿ ಬಂದಿದ್ದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಆರ್‍ಎಸ್ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕೆಆರ್‌ಎಸ್ ಡ್ಯಾಂ ಬಳಿ ಇತ್ತೀಚೆಗೆ ಭಾರೀ ವಿಚಿತ್ರ ಶಬ್ಧ ಕೇಳಿ ಬರುತ್ತಿತ್ತು. ಈ ಹಿನ್ನೆಲೆ ಸುತ್ತಲಿನ ಗ್ರಾಮಸ್ತರು ಭಯಗೊಂಡಿದ್ದರು. ಡ್ಯಾಂ ಪೂರ್ತಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಹ ಆತಂಕಗೊಂಡಿತ್ತು. ಈ ಎಲ್ಲ ಕಾರಣಗಳಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೆಆರ್‌ಎಸ್ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಸಂಪೂರ್ಣ ಬಂದ್ ಮಾಡಲಾಗಿದ್ದು, ಸೆಪ್ಟೆಂಬರ್ 4ರ ವರೆಗೆ ಕಲ್ಲು ಗಣಗಾರಿಕೆಯನ್ನು ನಿರ್ಬಂಧಿಸಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
Advertisement
Advertisement
ಪಾಂಡವಪುರ ತಾಲೂಕು ತಹಶೀಲ್ದಾರ್ ಪ್ರಮೋದ್.ಎಲ್.ಪಾಟೀಲ್ ಈ ಕುರಿತು ಆದೇಶ ಹೊರಡಿಸಿದ್ದು, ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ವ್ಯಾಪ್ತಿಯ ಚಿನಕುರುಳಿ, ಹೊನಗಾನಹಳ್ಳಿ, ದೊಡ್ಡಭೋಗನಹಳ್ಳಿ, ಮೊಳೆಸಂದ್ರ, ಅಲ್ಪಳ್ಳಿ, ಕಟ್ಟೇರಿ, ಕಣಿವೆಕೊಪ್ಪಲು, ಚಂದ್ರೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
Advertisement
ಕೆಆರ್‌ಎಸ್ ಸುತ್ತಮುತ್ತ ನಿಗೂಢ ಶಬ್ಧ ಕೇಳಿಬರುತ್ತಿದ್ದರಿಂದ ಭಾರೀ ಅಪಾಯ ಕಾದಿದ್ಯಾ ಎನ್ನುವ ಪ್ರಶ್ನೆ ಇತ್ತೀಚೆಗೆ ಎದ್ದಿತ್ತು. ಆಗಸ್ಟ್ 17ರಂದು ಶುಕ್ರವಾರ ಸಂಜೆ ಏಳೆಂಟು ಬಾರಿ ಭಾರೀ ಶಬ್ಧವಾಗಿತ್ತು. ರಾತ್ರಿ 7.25 ರಿಂದ 7.35ರ ಅವಧಿಯಲ್ಲಿ ಮತ್ತೆ ಶಬ್ಧ ಕೇಳಿತ್ತು. ಇದರಿಂದಾಗಿ ಅಧಿಕಾರಿಗಳು ಮತ್ತು ಸ್ಥಳೀಯರಲ್ಲಿ ಆತಂಕ ಹೆಚ್ಚಿತ್ತು.
Advertisement
ಡ್ಯಾಂ ಬಳಿ ಆಗುತ್ತಿರುವ ಆ ನಿಗೂಢ ಶಬ್ಧದ ಮೂಲ ತಿಳಿಯಲು ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು. ಕಳೆದ 2 ವರ್ಷಗಳಿಂದ ಹಲವು ಬಾರಿ ಇದೇ ರೀತಿ ನಿಗೂಢ ಶಬ್ಧ ಕೇಳಿ ಬಂದಿದೆ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.