ಅಹಮದಾಬಾದ್: ಸೋಮವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಅಹಮದಾಬಾದ್‍ನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಲೋ ಬಿಪಿ ಯಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ತೊಗಾಡಿಯಾ ಅವರನ್ನ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳಲಾಯಿತು. ಈಗ ಅವರು ಚೇತರಿಸಿಕೊಳ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ತೊಗಾಡಿಯಾ ಅವರು ಸೋಮವಾರ ಬೆಳಗ್ಗೆ ಸುಮಾರು 11 ಗಂಟೆಗೆ ವಿಹಚ್‍ಪಿ ಕಚೇರಿಯಿಂದ ಆಟೋ ರಿಕ್ಷಾದಲ್ಲಿ ತೆರಳಿದ್ದು, ನಂತರ ಕಾಣೆಯಾಗಿದ್ದರು ಎಂದು ವರದಿಯಾಗಿದೆ. ತೊಗಾಡಿಯಾ ಅವರು ಅಹಮದಾಬಾದ್‍ನ ಕೊಟಾರ್‍ಪುರ್ ಪ್ರದೇಶದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಯಾರೋ ಅಪರಿಚಿತರು ನೋಡಿದ್ದರು. ನಂತರ ಆ ವ್ಯಕ್ತಿ ಆಂಬುಲೆನ್ಸ್ ಗೆ ಕರೆ ಮಾಡಿ ತೊಗಾಡಿಯಾ ಅವರನ್ನ ಆಸ್ಪತ್ರೆಗೆ ಕರೆತರಲಾಯ್ತು ಎಂದು ಚಂದ್ರಮಣಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ಹೇಳಿದ್ದಾರೆ.
ತೊಗಾಡಿಯಾ ಕಾಣೆಯಾಗಿರುವ ಹಿಂದೆ ಪೊಲೀಸರ ಕೈವಾಡವಿದೆ ಎಂದು ಸೋಮವಾರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ತೊಗಾಡಿಯಾ ಅವರನ್ನ ಪತ್ತೆ ಮಾಡಲು ನಾಲ್ಕು ಪೊಲೀಸ್ ತಂಡಗಳನ್ನ ರಚಿಸಲಾಗಿತ್ತು.
ಹಳೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೊಗಾಡಿಯಾ ವಿರುದ್ಧ ಅರೆಸ್ಟ್ ವಾರೆಂಟ್ ಹಿಡಿದು ರಾಜಸ್ಥಾನ ಪೊಲೀಸರು ಅವರ ಮನೆಗೆ ಹೋಗಿದ್ದರು. ಆದ್ರೆ ತೊಗಾಡಿಯಾ ಮನೆಯಲ್ಲಿಲ್ಲದ ಕಾರಣ ವಾಪಸ್ಸಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತೊಗಾಡಿಯಾ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ವಿಹೆಚ್‍ಪಿ ಕಾರ್ಯಕರ್ತರು ಸೋಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಘೋಷಣೆಗಳನ್ನ ಕೂಗಿ, ಸರ್‍ಖೇಜ್- ಗಾಂಧಿನಗರ ಹೆದ್ದಾರಿಯಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ತೊಗಾಡಿಯ ಅವರು ಇರುವ ಸ್ಥಳವನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಿದ್ದರು.
ಆದ್ರೆ ತೊಗಾಡಿಯಾ ಅವರನ್ನು ನಮ್ಮ ತಂಡ ಬಂಧಿಸಿಲ್ಲ ಎಂದು ರಾಜಸ್ಥಾನ ಪೊಲೀಸ್ ನ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ವಸಿಷ್ಠ ಸ್ಪಷ್ಟಪಡಿಸಿದ್ದರು.