ಬಾಗಲಕೋಟೆ: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರಿಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಖಂಡಿಸಿ ಬಾಗಲಕೋಟೆ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಕಾರ್ಯಕರ್ತರೆಲ್ಲರು ಸಾಮಾಹಿಕವಾಗಿ ರಾಜೀನಾಮೆ ನೀಡಿದ್ದಾರೆ.
ಯುವ ಮೋರ್ಚಾದಿಂದ ಸಭೆ ನಡೆಸಿದ ಬಳಿಕ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆನಂದ ಇಂಗಳಗಾಂವಿ ಹಾಗೂ ಪ್ರಧಾನ ಕಾರ್ಯದರ್ಶಿ ಭುವನೇಶ್ವರ ಪೂಜಾರ್ ಹೇಳಿದ್ದಾರೆ.
ಜಿಲ್ಲೆಯ ಯುವೋರ್ಚಾದ 12 ಮಂಡಳಗಳ ಪದಾಧಿಕಾರಿಗಳು, ಕಾರ್ಯಕರ್ತರು ರಾಜೀನಾಮೆ ನೀಡಿದ್ದು, ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅಲ್ಲದೆ ಬಿಜೆಪಿ ರಾಜ್ಯ ಪ್ರಮುಖರ ವಿರುದ್ಧ ಯುವ ಮೋರ್ಚಾ ಆಕ್ರೋಶ ಹೊರಹಾಕಿದೆ. ಇದನ್ನೂ ಓದಿ: ನಳಿನ್ ಕುಮಾರ್ ಕಾರನ್ನು ಎತ್ತಲು ಪ್ರಯತ್ನಿಸಿದ ಕಾರ್ಯಕರ್ತರು – ಬೆಳ್ಳಾರೆಯಲ್ಲಿ ಲಾಠಿಚಾರ್ಜ್
ಗ್ರಹ ಸಚಿವರು, ಸಿಎಂ, ಸೇರಿದಂತೆ ಸಂಬಂಧ ಪಟ್ಟವರೆಲ್ಲರೂ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಸೂಕ್ತ ಕ್ರಮ ಕೈಗೊಳ್ಳುವ ವರೆಗೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ತೀರ್ಮಾನ ಮಾಡಿದ್ದೇವೆ ಎಂದು ನಗರದ ವಿದ್ಯಾಗಿರಿಯಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆನಂದ ಇಂಗಳಗಾಂವಿ ಕಿಡಿಕಾರಿದ್ದಾರೆ.
ಇತ್ತ ಚಿಕ್ಕಮಗಳೂರಿನಲ್ಲಿ ಕೂಡ ಜಿಲ್ಲಾ ಯುವ ಮೋರ್ಚಾದ ಸುಮಾರು 30ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಅರವಿನಗಂಡಿ, ಪ್ರಧಾನ ಕಾರ್ಯದರ್ಶಿ ಸಂತೋಷ್, ಗಗನ್ ಕಡೂರು, ಉಪಾಧ್ಯಕ್ಷ ಸಚಿನ್, ಜಿಲ್ಲಾ ಕಾರ್ಯದರ್ಶಿ ಶಶಿ, ಮಂಡಲ ಅಧ್ಯಕ್ಷ ರಾಜೇಶ್, ಕಾಂಚನ್ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ.