ಹುಬ್ಬಳ್ಳಿ: ರಾಜ್ಯದಲ್ಲಿ ಹಿಂದೂಗಳ ರಕ್ಷಣೆಯಾಗುತ್ತಿಲ್ಲ. ರಕ್ಷಣೆ ಮಾಡಲು ಬಿಜೆಪಿಯಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್‍ನಿಂದಲೂ ಸಾಧ್ಯವಿಲ್ಲ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ನನಗೆ ಇಬ್ಬರು ಗನ್ ಮ್ಯಾನ್‍ಗಳನ್ನು ಕೊಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಒಬ್ಬ ಗನ್ ಮ್ಯಾನ್ ಅನ್ನು ಕಿತ್ತುಕೊಂಡಿದ್ದಾರೆ. ಇದಕ್ಕೆ ನನ್ನ ಧಿಕ್ಕಾರವಿದೆ.
ಜಿಹಾದಿಗಳಿಗೆ ಉತ್ತರ ಕೊಡುವಂತಹ ತಾಕತ್ತು ಕೇವಲ ಹಿಂದೂ ಸಂಘಟನೆಗಳಿಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ನನಗೆ ಅಧಿಕಾರ ಕೊಟ್ಟರೆ ಬುಲ್ಡೋಜರ್ ಆಡಳಿತ ತರುತ್ತೇನೆ. ಎರಡನೇ ಯೋಗಿಯಾಗಿ ಕರ್ನಾಟಕದಲ್ಲಿ ಕೆಲಸ ಮಾಡುತ್ತೇನೆ. ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣವನ್ನು ಎನ್‍ಐಎ ತನಿಖೆಗೆ ನೀಡಲು ಆಗ್ರಹ ಕೇಳಿಬರುತ್ತಿವೆ. ಪರೇಶ್ ಮೇಸ್ತಾ ಸೇರಿದಂತೆ ಅನೇಕ ಪ್ರಕರಣಗಳನ್ನು ಎನ್‍ಐಎಗೆ ಕೊಟ್ಟರು. ಇಲ್ಲಿಯವರೆಗೂ ಏನೂ ಆಗಿಲ್ಲ. ಹೀಗಾಗಿ ನಮ್ಮ ಪೊಲೀಸರೇ ಒಳ್ಳೆಯ ತನಿಖೆಯನ್ನು ಮಾಡುತ್ತಾರೆ. ಕೊಲೆಗೆ ನ್ಯಾಯ ಕೊಡಿಸುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಹಮ್ಮದ್ ಫಾಜಿಲ್ ಬರ್ಬರ ಹತ್ಯೆ- ಮಂಗಳೂರಿನ ಬಜ್ಬೆ, ಪಣಂಬೂರು, ಸುರತ್ಕಲ್, ಮುಲ್ಕಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಪ್ರವೀಣ್ ಶವಯಾತ್ರೆಯಲ್ಲಿ ಲಾಠಿ ಚಾರ್ಜ್ ಮಾಡಿದ್ದು ಅಕ್ಷಮ್ಯ ಅಪರಾಧವಾಗಿದೆ. ಬಿಜೆಪಿ ವಿಫಲತೆ ಮುಚ್ಚಿಕೊಳ್ಳಲು ಲಾಠಿ ಚಾರ್ಜ್ ಮಾಡಲಾಗಿದೆ. ಲಾಠಿ ಚಾರ್ಜ್ ಮಾಡಲು ಯಾರು ಅನುಮತಿ ನೀಡಿದರು ಎನ್ನುವುದು ತನಿಖೆಯಾಗಬೇಕು. ಲಾಠಿ ಚಾರ್ಜ್ ಮಾಡಿದವರೆಲ್ಲರೂ ಅಮಾನತು ಆಗಬೇಕು. ಲಾಠಿ ಚಾರ್ಜ್ ಮಾಡಿದ್ದಕ್ಕೆ ಸಿಎಂ ಮತ್ತು ಗೃಹಸಚಿವರು ರಾಜ್ಯದ ಜನತೆ ಮುಂದೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪ್ರವೀಣ್ ಹತ್ಯೆಗೆ ರಾಜಸ್ಥಾನ ಸಿಎಂ ಖಂಡನೆ
ಹಿಂದೂಗಳ ಸುರಕ್ಷತೆ ಮಾಡಲು ಬಿಜೆಪಿಗೆ ಯೋಗ್ಯತೆ ಇಲ್ಲ. ಧ್ವಜ ಹಿಡಿದುಕೊಳ್ಳಲು, ಪೋಸ್ಟರ್ ಅಂಟಿಸಲು ಮಾತ್ರ ಇವರಿಗೆ ಬಡ ಕಾರ್ಯಕರ್ತರು ಬೇಕು. ಆದರೆ ಅಧಿಕಾರ ಅನುಭವಿಸಲು ಬಿಜೆಪಿ ನಾಯಕರ ಮಕ್ಕಳು ಬೇಕು. ಬಿಜೆಪಿಯಲ್ಲಿ ಇರುವವರು ಪಕ್ಕಾ ಬಿಜೆಪಿಗರು ಅಲ್ಲಾ. ಬದಲಿಗೆ ಶೇ. 60ರಷ್ಟು ಕಮ್ಯೂನಿಸ್ಟರು, ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ಇದ್ದಾರೆ. ಇಂತಹವರಿಗೆ ಯಾವುದೇ ಸಿದ್ಧಾಂತವಿಲ್ಲ ಅವರಿಗೆ ಅಧಿಕಾರ ಅಷ್ಟೇ ಬೇಕು. ಬಿಜೆಪಿಯಲ್ಲಿ ಹಿಂದುತ್ವನ್ನು ಮರೆಮಾಚಿದ್ದಾರೆಂದು ವಾಗ್ದಾಳಿ ನಡೆಸಿದರು.