ನನ್ನ ಮುಂದಿನ ಜೀವನ ಏನು ಎಂದು ಗೊತ್ತಿಲ್ಲ: ಪ್ರವೀಣ್ ಪತ್ನಿ ನೂತನ ಕಣ್ಣೀರು
- ನಾಯಕರನ್ನು ನಂಬಿ ನಿಂತರೆ ನಾವು ಕೆಟ್ಟ ಹಾಗೆ

– ಪ್ರವೀಣ್ ಕನಸು ನನಸು ಮಾಡಲು ಸಾಧ್ಯವೋ ಗೊತ್ತಿಲ್ಲ
ಮಂಗಳೂರು: ನನ್ನ ಮುಂದಿನ ಜೀವನ ಹೇಗೆ ಎಂಬುದು ನನಗೆ ಗೊತ್ತಿಲ್ಲ. ಪ್ರವೀಣ್ ಇಲ್ಲದ ಜೀವನ ಊಹಿಸಲು ಸಾಧ್ಯವಿಲ್ಲ ಎಂದು ಹತ್ಯೆಯಾದ ಪ್ರವೀಣ್ ಕುಮಾರ್ ನೆಟ್ಟಾರ್ ಪತ್ನಿ ನೂತನ ಕಣ್ಣೀರು ಹಾಕಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಪತಿಯನ್ನು ಹತ್ಯೆಗೈದ ಆರೋಪಿಗಳನ್ನು ಪತ್ತೆಹಚ್ಚಿ ಅವರಿಗೆ ಕಠಿಣ ಶಿಕ್ಷೆ ಕೊಡಬೇಕು. ಹಂತಕರಿಗೆ ಜಾಮೀನು ಕೊಡುವವರು ಮುಂದೆ ಬರಬಾರದು. ಕೋರ್ಟ್ ಕೂಡ ಅವರಿಗೆ ಜಾಮೀನು ನೀಡಬಾರದು. ಪ್ರವೀಣ್ ಇಲ್ಲದ ಜೀವನ ಊಹಿಸಲೂ ಸಾಧ್ಯವಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ನೀವು ಊರಿಗೆ ಹಿರಿಯರು, ಕೋಳಿ ಅಂಗಡಿ ಉದ್ಘಾಟನೆಗೆ ತಂದೆಯನ್ನು ಆಹ್ವಾನಿಸಿದ್ದರು: ಪ್ರವೀಣ್ ಬಗ್ಗೆ ಆರೀಫ್ ಮಾತು
ನನಗೆ ಉದ್ಯೋಗ ಇದ್ದರೆ ನಾನು ಕುಟುಂಬ ನಿಭಾಯಿಸಿಕೊಂಡು ಹೋಗುತ್ತಿದ್ದೆ. ನಾನು ಖಾಸಗಿ ಸಂಸ್ಥೆಯೊಂದರಲ್ಲಿ ದುಡಿಯುವ ಉದ್ಯೋಗಿ. ಚಿಕನ್ ಶಾಪ್ ಅನ್ನು ನಾನು ನೋಡಿಕೊಂಡಿದ್ದೆ ಇನ್ನು ನನಗೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಮನೆ ಕಟ್ಟಬೇಕು ಎಂಬುದು ಪ್ರವೀಣ್ ಕನಸಾಗಿತ್ತು. ಮನೆ ಕಟ್ಟಲು ತನ್ನಿಂದಾದ ಪ್ರಯತ್ನವನ್ನು ಮಾಡುತ್ತಿದ್ದರು. ಇನ್ನೂ ಹೊಸ ಮನೆ ಕಟ್ಟಲು ಸಾಧ್ಯವೇ ಇಲ್ಲವೇ ಗೊತ್ತಿಲ್ಲ. ಅಲ್ಲದೆ ಪ್ರವೀಣ್ ಕನಸನ್ನು ನನಗೆ ನನಸು ಮಾಡಲು ಸಾಧ್ಯವೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮನೆಯ ಸದಸ್ಯನನ್ನ ಕಳೆದುಕೊಂಡಿದ್ದೇವೆ- ಪ್ರವೀಣ್ ಬಗ್ಗೆ ಮಾತನಾಡುತ್ತಾ ಗದ್ಗದಿತರಾದ ಆರಗ
ನಾಯಕರನ್ನು ನಂಬಿ ನಿಂತರೆ ನಾವು ಕೆಟ್ಟ ಹಾಗೆ. ಪ್ರವೀಣ್ ಪಕ್ಷ ಸಂಘಟನೆಗಾಗಿ 24 ಗಂಟೆ ದುಡಿದವರು. ಪ್ರವೀಣ್ ಗೆ ವೈರಿ ಶತ್ರು ಅಂತ ಯಾರೂ ಇರಲಿಲ್ಲ. ಎಲ್ಲರನ್ನೂ ಒಂದೇ ರೀತಿ ನೋಡುತ್ತಿದ್ದರು. ಆರೋಪಿಗಳನ್ನು ಬಂಧನ ಮಾಡಿದರೆ ನನಗೆ, ನನ್ನ ಮನೆಯವರಿಗೆ ಸಮಾಧಾನವಾಗುತ್ತದೆ ಎಂದು ನೂತನ ಹೇಳಿದರು.