ಬೆಂಗಳೂರು: ಹಿರಿಯ ನಟ ಕೆ.ಎಸ್.ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಸಿನಿಮಾ ಅವಕಾಶ ಇಲ್ಲದೆ ಊಬರ್ ಕ್ಯಾಬ್ ಓಡಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕನ್ನಡದ ಹಿರಿಯ ನಟರ ಮಗನ ಸ್ಥಿತಿಯನ್ನು ಪಬ್ಲಿಕ್ ಟವಿ ವರದಿ ಮಾಡಿದ್ದು, ಸುದ್ದಿ ತಿಳಿದ ಬಳಿಕ ಕನ್ನಡ ಚಿತ್ರರಂಗದ ಕೆಲವರು ಶಂಕರ್ ಸಹಾಯಕ್ಕೆ ಮುಂದಾಗಿದ್ದಾರೆ.
ಶಂಕರ್ ಅಶ್ವತ್ಥ್ ಸಿನಿಮಾಗಳಲ್ಲಿ ಮತ್ತು ಧಾರಾವಾಹಿಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ತಮ್ಮ ಪಾತ್ರಕ್ಕೆ ತಕ್ಕ ಅವಕಾಶಗಳು ಸಿಗದೇ ಇರುವ ಕಾರಣ ಊಬರ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಪಬ್ಲಿಕ್ ಟಿವಿಯ ಜೊತೆ ಮಾತನಾಡಿ, ನನಗೆ ಸೂಕ್ತವಾದ ಪಾತ್ರ ಸಿಕ್ಕಿಲ್ಲ ಅಷ್ಟೇ. ಇದರಿಂದ ನಾವು ಸಿನಿಮಾ ರಂಗವನ್ನು ದೂರುವುದಿಲ್ಲ. ಈಗ ನಾನು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದರು.
ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಚಿತ್ರರಂಗದ ಹಲವರು ಇವರ ಬಳಿ ಹೋಗಿ ಅವಕಾಶಗಳನ್ನು ಕೊಟ್ಟಿದ್ದಾರೆ. ಆದರೆ ಅವರು ನಾನು ಸ್ವಾಭಿಮಾನಿಯಾಗಿ ಬದುಕುತ್ತೇನೆ ಎಂದು ಹೇಳಿದ್ದರು. ಆದರೂ ಮೈಸೂರಿಗೆ ತೆರಳಿ ಶಂಕರ್ ಅಶ್ವಥ್‍ರನ್ನು ಬಿಗ್‍ಬಾಸ್ ಸೀಸನ್ 4 ವಿಜೇತ ಪ್ರಥಮ್ ಭೇಟಿ ಮಾಡಿದ್ದಾರೆ. ತಮ್ಮ ಮುಂದಿನ `ಪ್ರಥಮ್ ಬಿಲ್ಡಪ್’ ಸಿನಿಮಾದಲ್ಲಿ ನೀವು ಅಭಿನಯಿಸಬೇಕು ಎಂದು ಹೇಳಿ ಮಾತನಾಡಿ ಬಂದಿದ್ದಾರೆ.
`ಲವ್ ಗುರು’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ರಾಜ್ ಶಂಕರ್ ಅಶ್ವಥ್ ನೋವಿಗೆ ಸ್ಪಂದಿಸಿದ್ದು, ತಮ್ಮ ಮುಂದಿನ `ಆರೆಂಜ್’ ಸಿನಿಮಾವನ್ನು ನಟ ಗಣೇಶ್ ಜೊತೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೆ ಒಂದು ಪಾತ್ರ ನೀಡಲು ಅವರು ಮುಂದಾಗಿದ್ದಾರೆ. ನವರಸನಾಯಕ ಜಗ್ಗೇಶ್ ಕೂಡ ಶಂಕರ್ ಅಶ್ವಥ್ ಪರಿಸ್ಥಿತಿಗೆ ಟ್ವೀಟ್ ಮೂಲಕ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಜನವರಿ 19ಕ್ಕೆ ನನ್ನ ತಂದೆ ಕೆ.ಎಸ್.ಅಶ್ವಥ್ ಅವರ 8ನೇ ವರ್ಷದ ಶ್ರಾದ್ಧವಿದೆ. ನಮ್ಮ ಪದ್ಧತಿ ಪ್ರಕಾರ ಈ ಕಾರ್ಯ ಮಾಡುವಾಗ ಯಾವುದೇ ಸಾಲ ಮಾಡಬಾರದು. ಯಾವುದನ್ನೂ ಮಾರಿ ಕಾರ್ಯ ಮಾಡುವಂತಿಲ್ಲ. ಕಷ್ಟಪಟ್ಟು ದುಡಿದು, ಅದರಲ್ಲಿ ಕಾರ್ಯ ಮಾಡಬೇಕು. ಒಂದೂವರೆ ತಿಂಗಳಿನಿಂದ ಯಾವುದೇ ಸಂಪಾದನೆ ಇಲ್ಲದೆ ಮನೆಯಲ್ಲೇ ಕುಳಿತಿದ್ದೆ. ಆದ್ದರಿಂದ ಊಬರ್ ಕ್ಯಾಬ್ ಓಡಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದರು.
ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ `ನಾಗರಹಾವು’ ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರಾಗಿ ಕಾಣಿಸಿಕೊಂಡ ಕೆ.ಎಸ್ ಅಶ್ವಥ್ ತಮ್ಮ ಪಾತ್ರಗಳ ಮೂಲಕ ಈಗಲೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜರೊಡನೆ ಕೆ.ಎಸ್. ಅಶ್ವಥ್ ತೆರೆ ಹಂಚಿಕೊಂಡಿದ್ದರು. ಇದನ್ನು ಓದಿ: ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!