ಸಾಯಿಸಾಗರ್ ಫಿಲ್ಮ್ ಫ್ಯಾಕ್ಟರಿ ಲಾಂಛನದಲ್ಲಿ ವಿದ್ಯಾಸಾಗರ್ ಅವರು ನಿರ್ಮಿಸಿರುವ, ಲಾಲಿ ರಾಘವ ನಿರ್ದೇಶನದಲ್ಲಿ ಪ್ರತಾಪ್ ಸಿಂಹ ನಾಯಕರಾಗಿ ನಟಿಸಿರುವ ‘ಸ್ಥಬ್ಧ’ (Stabdha) ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ರಾಘವೇಂದ್ರ ರಾಜಕುಮಾರ್ (Raghavendra Rajkumar) ಸೇರಿದಂತೆ ಅನೇಕ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರತಾಪ್ ಸಿಂಹ (Pratap Simha) ನಾಯಕರಾಗಿ ನಟಿಸಿರುವ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಚೆನ್ನಾಗಿದೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜಕುಮಾರ್ ಹಾರೈಸಿದರು. ಇದನ್ನೂ ಓದಿ:ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ
ಸ್ಥಬ್ಧ ಇದೊಂದು ಭ್ರಮೆಯ ಸುತ್ತ ನಡೆಯುವ ಕಥೆ. ಹಾರಾರ್, ಸಸ್ಪೆನ್ಸ್ ಥ್ರಿಲ್ಲರ್ ಎನ್ನಬಹುದು. ನಲವತ್ತೈದು ದಿನಗಳ ಕಾಲ ಬೆಂಗಳೂರು, ಮಂಗಳೂರು, ಉಡುಪಿಯಲ್ಲಿ ಚಿತ್ರೀಕರಣ ನಡೆದಿದೆ. ಹರ್ಷಿಕಾ ಪೂಣಚ್ಛ, ರಾಘವೇಂದ್ರ ರಾಜಕುಮಾರ್, ಪ್ರಿಯಾಂಕ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಲಾಲಿ ರಾಘವ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ನಿರ್ಮಾಪಕರಿಗೆ ಧನ್ಯವಾದ ಎಂದರು ನಾಯಕ ಪ್ರತಾಪ್ ಸಿಂಹ.
ನಿರ್ಮಾಪಕ ವಿದ್ಯಾ ಸಾಗರ್ ನಮ್ಮಣ್ಣನ ಸ್ನೇಹಿತರು. ಚಿತ್ರದ ಕಥೆ ಕೇಳಿದ ಅವರು, ನಿರ್ಮಾಣಕ್ಕೆ ಮುಂದಾದರು. ನಮ್ಮ ತಂಡದ ಸಹಕಾರದಿಂದ ಚಿತ್ರ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಎಲ್ಲರಿಗೂ ಧನ್ಯವಾದ ಎಂದರು ನಿರ್ದೇಶಕ ಲಾಲಿ ರಾಘವ. ಒಂದೊಳ್ಳೆ ಚಿತ್ರ ನಿರ್ಮಾಣ ಮಾಡಿರುವ ಖುಷಿಯಿದೆ ಎಂದು ನಿರ್ಮಾಪಕ ವಿದ್ಯಾಸಾಗರ್ ತಿಳಿಸಿದರು. ತಮ್ಮ ಪಾತ್ರದ ಬಗ್ಗೆ ನಾಯಕಿ ಹರ್ಷಿಕಾ ಪೂಣಚ್ಛ (Harshika Poonacha) ಮಾಹಿತಿ ನೀಡಿದರು. ನಟ ಭಜರಂಗಿ ಪ್ರಸನ್ನ, ಸಂಗೀತ ನಿರ್ದೇಶಕ ಆರವ್ ರಿಷಿಕ್, ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.