ನಾನು ಕೆಲಸ ಮಾಡೋಕಷ್ಟೇ ಬಂದೆ, ಮಂತ್ರಿ ಆಸೆ ಇಲ್ಲವೇ ಇಲ್ಲ: ಪ್ರತಾಪ್ ಸಿಂಹ

Public TV
1 Min Read
MYS PRATHAP SIMHA

ಮೈಸೂರು: ಮಂತ್ರಿಯಾಗಬೇಕು ಅನ್ನೋ ಆಸೆ ಇಟ್ಟುಕೊಂಡು ನಾನು ರಾಜಕಾರಣಕ್ಕೆ ಬಂದವನಲ್ಲ. ಉತ್ತಮ ಕೆಲಸ ಮಾಡಬೇಕು ಎನ್ನುವ ಆಸೆಯಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರು ಮತ್ತು ಕೊಡಗು ಜನರು ಪ್ರತಾಪ್ ಸಿಂಹನನ್ನು ಮಂತ್ರಿ ಮಾಡಬೇಕು ಅಥವಾ ರಾಜಕೀಯವಾಗಿ ಬೆಳೆಸಬೇಕು ಎಂದು ವೋಟು ಹಾಕಿಲ್ಲ. ಐದು ವರ್ಷ ಕೆಲಸ ಮಾಡಲು ವೋಟು ಹಾಕಿದ್ದಾರೆ. ಕೆಲಸ ಮಾಡಿದ್ದಕ್ಕೆ ಇನ್ನೊಂದು ಅವಕಾಶ ಕೊಡಬೇಕು ಎಂದು ಜನರು ಮತ ನೀಡಿದ್ದಾರೆ. ಆದ್ದರಿಂದ ನಾನು ಮಂತ್ರಿಯಾಗಬೇಕು ಅಥವಾ ರಾಜಕೀಯದಲ್ಲಿ ಇನ್ನೇನು ಆಗಬೇಕೆಂಬ ಆಸೆಯಿಲ್ಲ ಎಂದು ಸ್ಪಷ್ಟ ಪಡಿಸಿದರು.

MYS PRATHAP

ನಾನು ಪತ್ರಕರ್ತನಾಗಿ ಕೆಲಸ ಮಾಡಲು ರಾಜಕಾರಣದಲ್ಲಿ ಒಂದು ಅವಕಾಶ ಸಿಕ್ಕಿದೆ. ನಾನೊಬ್ಬ ಟಿಪಿಕಲ್ ರಾಜಕಾರಣಿ ಅಲ್ಲ. ಅಧಿಕಾರದ ಉದ್ದಕ್ಕೂ ಆಸೆ ಪಡುವ ರಾಜಕಾರಣಿಯೂ ಅಲ್ಲ. ಜನರ ಬಗ್ಗೆ ಕಾಳಜಿ ಇಟ್ಟುಕೊಂಡು ಬರೆಯುವತಂಹ ಪತ್ರಕರ್ತನ ರೀತಿ ಕೆಲಸ ಮಾಡುತ್ತೇನೆ. ನಾನು ಪತ್ರಕರ್ತನಾಗಿದ್ದರಿಂದ ನನಗೂ ಸಂವೇದನೆ ಇದೆ, ಅಂತರಂಗದಲ್ಲಿ ನಾನು ಈಗಲೂ ಪತ್ರಕರ್ತನೇ. ಪತ್ರಕರ್ತರು ಬರೆಯುತ್ತಾರೆ, ನಾನು ಬರೆದಿದ್ದಕ್ಕೆ ಸ್ಪಂದಿಸುವ ಅವಕಾಶ ಸಿಕ್ಕಿದೆ ಎಂದರು.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಹಿನ್ನೆಲೆಯಲ್ಲೆ ಬಿಜೆಪಿಯ ನೂತನ ಸಂಸದ ಪ್ರತಾಪ್ ಸಿಂಹ ಅವರು ಮತದಾರರು, ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಹಾರಾಜರನ್ನ ಬಿಟ್ಟರೆ ಅತಿ ಹೆಚ್ಚು ಅಂತರದಿಂದ ನಾನು ಗೆದ್ದಿದ್ದೇನೆ. 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಇದರಿಂದ ಮತದಾರರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

MYS PRATHAP SIMHA

ಈ ಬಾರಿಯ ಚುನಾವಣೆಯಲ್ಲಿ ಪ್ರತಾಪ್ ಸಿಂಹ 1,36,194 ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ಸಿನ ವಿಜಯ್ ಶಂಕರ್ ಅವರನ್ನು ಸೋಲಿಸಿದ್ದಾರೆ. ಪ್ರತಾಪ್ ಸಿಂಹ 6,85,105 ಮತಗಳನ್ನು ಪಡೆದರೆ ವಿಜಯ್ ಶಂಕರ್ 5,48,911 ಮತಗಳನ್ನು ಪಡೆದಿದ್ದಾರೆ.

2014ರ ಚುನಾವಣೆಯಲ್ಲಿ ಪ್ರತಾಪ್ ಸಿಂಹ 31,608 ಮತಗಳ ಅಂತರದಿಂದ ಗೆದ್ದಿದ್ದರು. ಪ್ರತಾಪ್ ಸಿಂಹ 5,03,908 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ, ಪ್ರಸ್ತುತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು 4,72,300 ಮತಗಳನ್ನು ಪಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *