Connect with us

Karnataka

ಹೌದು ಸರ್ ಹಿಂದೆಯೂ ಈ ರೀತಿ ಮಾತನಾಡಿದ್ರಿ, ಆಮೇಲೆನಾಯ್ತು ನೆನಪು ಮಾಡಿಕೊಳ್ಳಿ- ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು

Published

on

ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಸೋತಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಲೆ ಬೀಸುತ್ತಿದೆ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯನವರು, ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರದ ವಿರುದ್ಧವಾದ ಗಾಳಿ ಬೀಸುತ್ತಿದೆ. ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ನಮ್ಮ ಪಕ್ಷ ಕಳೆದ ಚುನಾವಣೆಗಳಿಗಿಂತ ಬೃಹತ್ ಅಂತರದಿಂದ ಜಯ ಸಾಧಿಸಿದೆ. ಇದು ಮುಂಬರುವ ಲೋಕಸಭಾ ಚುನಾವಣೆಗೆ ಜನರ ಮನಸ್ಸು ಯಾವ ಪಕ್ಷದ ಪರವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ಪ್ರತಾಪ್ ಸಿಂಹ, ಹೌದು ಸಾರ್. ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆ ನಂತರವೂ ಹೀಗೇ ಪೌರುಷದ ಮಾತನಾಡಿದ್ರಿ, ಆಮೇಲೇನಾಯ್ತು ಅಂತ ಸ್ವಲ್ಪ ನೆನಪು ಮಾಡಿಕೊಳ್ಳಿ ಎಂದು ಬರೆದು ತಿರುಗೇಟು ನೀಡಿದ್ದಾರೆ.

ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಇಂದು ಸರಣಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಹೀಗಾಗಿ ಇಲ್ಲಿ ಸಿದ್ದರಾಮಯ್ಯನವರ ಟ್ವೀಟ್ ಗಳನ್ನು ನೀಡಲಾಗಿದೆ.

ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ. ಕತ್ತಲೆಯಿಂದ ಬೆಳಕಿನ ಕಡೆಗೆ ಜನಪಯಣ. ಮೈತ್ರಿ ಸರ್ಕಾರ ಉರುಳಿಸುವ ದುಷ್ಟ ಆಲೋಚನೆಯಲ್ಲಿ ಕಾಲ ವ್ಯರ್ಥಮಾಡದೇ, ಇನ್ನಾದರೂ ಜನಮತಕ್ಕೆ ಮನ್ನಣೆ ನೀಡಿ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತವಾಗಿ ವಿರೋಧಪಕ್ಷವಾಗಿ ಕೆಲಸ ಮಾಡಬೇಕೆಂದು ರಾಜ್ಯದ ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇನೆ.

ಈ ಉಪ ಚುನಾವಣೆಯ ಗೆಲುವು ಕಾಂಗ್ರೆಸ್ ಪಕ್ಷದ ಗೆಲುವು ಹಾಗೂ ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ದೊರೆತ ಮನ್ನಣೆಯಾಗಿದೆ. ರಾಜ್ಯದ ಎಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒಂದಾಗಿ ಕೆಲಸ ಮಾಡಿರುವುದರಿಂದ ಈ ಗೆಲುವು ಸಾಧ್ಯವಾಗಿದೆಯೇ ಹೊರತು ಯಾರೋ ಒಬ್ಬರು ಮಾತ್ರ ಈ ಗೆಲುವಿನ ವಾರಸುದಾರರಲ್ಲ.

ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕೂಡ ನಮ್ಮ ಚುನಾವಣಾ ಮೈತ್ರಿ ಮುಂದುವರಿಯಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ, ಮುಂಬರುವ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಹೇಳುತ್ತಿದ್ದ ಬಿಜೆಪಿಯವರು, ಇಂದು ತಮ್ಮ ಅಸ್ತಿತ್ವವನ್ನೇ ಉಳಿಸಿಕೊಳ್ಳಲು ಹೋರಾಟ ನಡೆಸುವ ಪರಿಸ್ಥಿತಿ ಬಂದಿದೆ. ಇನ್ನಾದರೂ ಅವರು ಈ ಭ್ರಮೆಯಿಂದ ಹೊರಬರಲಿ.

ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರದ ವಿರುದ್ಧವಾದ ಗಾಳಿ ಬೀಸುತ್ತಿದೆ. ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ನಮ್ಮ ಪಕ್ಷ ಕಳೆದ ಚುನಾವಣೆಗಳಿಗಿಂತ ಬೃಹತ್ ಅಂತರದಿಂದ ಜಯ ಸಾಧಿಸಿದೆ. ಇದು ಮುಂಬರುವ ಲೋಕಸಭಾ ಚುನಾವಣೆಗೆ ಜನರ ಮನಸ್ಸು ಯಾವ ಪಕ್ಷದ ಪರವಾಗಿದೆ ಎಂಬುದನ್ನು ತೋರಿಸುತ್ತದೆ.

ಭಾರತೀಯ ಜನತಾ ಪಕ್ಷದ ಸೋಲಿನ ಸರಮಾಲೆ ಪ್ರಾರಂಭವಾಗಿದೆ. ಇದು 2019ರ ಲೋಕಸಭಾ ಚುನಾವಣೆಯಲ್ಲಿಯೂ ಮುಂದುವರಿಯಲಿದೆ. ರಾಜ್ಯದ ಮತದಾರರು ನಿರ್ಧರಿಸಿ ಆಗಿದೆ. ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಮಾತ್ರವಲ್ಲ ಕಾಂಗ್ರೆಸ್ ಪಕ್ಷವನ್ನು ಸದಾ ಬೆಂಬಲಿಸುತ್ತಲೇ ಬಂದಿರುವ ಸಾಂಪ್ರದಾಯಿಕ ಮತದಾರರು ಕೂಡಾ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಬೆಂಬಲಿಸಿದ್ದಾರೆ. ಧನ್ಯವಾದಗಳು.

ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳ ನಡುವಿನ ಸಂಪೂರ್ಣ ಸಮನ್ವಯವೇ ಮಿತ್ರಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಕಾರಣ. ಬಳ್ಳಾರಿಯ ಜನತಾ ಜನಾರ್ದನರಿಗೆ ಧನ್ಯವಾದಗಳು. ಜನಾರ್ದನ ರೆಡ್ಡಿಯವರ ಅಮಾನವೀಯ ನಡೆ-ನುಡಿಗೆ ಬಳ್ಳಾರಿ ಜನರೇ ಶಾಪ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *