ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿ ಕಾಮಗಾರಿಯಿಂದ ಹಳ್ಳಿ ರಸ್ತೆಗಳು ಹಾಳಾಗಿವೆ ಇವುಗಳನ್ನು ಸರಿಪಡಿಸದಿದ್ದರೆ ಸಂಸದ ಪ್ರತಾಪ್ ಸಿಂಹ (Pratap Simha) ಮನೆ ಮುಂದೆ ಧರಣಿ ಮಾಡುವುದಾಗಿ ಹೇಳಿದ್ದ ಮೇಲುಕೋಟೆ ಶಾಸಕ ಪುಟ್ಟರಾಜು (Puttaraju) ಹೇಳಿಕೆಯನ್ನು ಸಂಸದ ಪ್ರತಾಪ್ ಸಿಂಹ ಗಂಭೀರವಾಗಿ ತೆಗೆದುಕೊಂಡು ಇಂದು ಗುಂಡಿ ಬಿದ್ದಿರುವ ರಸ್ತೆಗಳನ್ನು ವೀಕ್ಷಣೆ ಮಾಡಿದ್ದಾರೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿ ಕಾಮಗಾರಿಗೆ ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ತಾಲೂಕು ವ್ಯಾಪ್ತಿಯ ಹಳ್ಳಿಗಳ ರಸ್ತೆಯಲ್ಲಿ ಮಣ್ಣು ಹಾಗೂ ಕಲ್ಲನ್ನು ಟಿಪ್ಪರ್ ಲಾರಿಗಳ ಮುಕಾಂತರ ತೆಗೆದುಕೊಂಡು ಹೋಗಿರುವುದರಿಂದ ಇದೀಗ ಈ ಭಾಗದ ರಸ್ತೆಗಳು ಗುಂಡಿ ಬಿದ್ದು ಸಂಪೂರ್ಣವಾಗಿ ಹಾಳಾಗಿವೆ. ಈ ರಸ್ತೆಗಳನ್ನು ಸರಿಪಡಿಸುವಂತೆ ಶಾಸಕ ಪುಟ್ಟರಾಜು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದ್ರು. ಅಲ್ಲಿಯೇ ಸಂಸದ ಪ್ರತಾಪ್ ಸಿಂಹ ಗಮನಕ್ಕೆ ತರಲು ಪುಟ್ಟರಾಜು ಪ್ರಯತ್ನಿಸಿದಾಗ ಪ್ರತಾಪ್ ಸಿಂಹ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಕಳೆದ ತಿಂಗಳು ಸುದ್ದಿಗೋಷ್ಠಿಯಲ್ಲಿ ಶಾಸಕ ಪುಟ್ಟರಾಜು ರಸ್ತೆಗಳನ್ನು ಸರಿಪಡಿಸುವ ಕಡೆ ಗಮನ ಕೊಡಲಿಲ್ಲ ಎಂದರೆ ನಾನು ಪ್ರತಾಪ್ ಸಿಂಹ ಮನೆ ಎದುರು ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಕಬಡ್ಡಿ ಅಂಗಳಕ್ಕಿಳಿದು ತೊಡೆ ತಟ್ಟಿದ ಶಾಸಕ ಪುಟ್ಟರಾಜು
ಇದೀಗ ಪುಟ್ಟರಾಜು ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಂಸದರು, ಇಂದು ಶಾಸಕ ಪುಟ್ಟರಾಜು ಜೊತೆಗೂಡಿ ಅಧಿಕಾರಿಗಳೊಂದಿಗೆ ಹಾಳಾಗಿರುವ ರಸ್ತೆಗಳನ್ನು ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಪ್ರತಾಪ್ ಸಿಂಹ, ಒಂದು ಹೆದ್ದಾರಿಗಾಗಿ ಹಳ್ಳಿಗಳ ರಸ್ತೆ ಮಾಡಿದ್ರೆ ಅದು ಶ್ರೇಯವಾಗುವುದಿಲ್ಲ. ಹಾಳಾಗಿರುವ ರಸ್ತೆಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ. ಪುಟ್ಟರಾಜು ಅವರು ಸಹ ಅಭಿವೃದ್ಧಿ ಪರವಾಗಿ ಇದ್ದಾರೆ, ಅವರ ಮಾತಿನಂತೆ ಇಂದು ನಾನು ಬಂದಿದ್ದೇನೆ. ಹೆದ್ದಾರಿ ಕಾಮಗಾರಿಯಿಂದ ಯಾವ ಯಾವ ರಸ್ತೆಗಳು ಆಳಾಗಿವೆ ಅವುಗಳನ್ನು ಸರಿಪಡಿಸುತ್ತೇವೆ ಎಂದರು. ಇದನ್ನೂ ಓದಿ: ನಾಳೆ ಮದ್ದೂರು ಬೈಪಾಸ್ ಓಪನ್
ಇನ್ನೂ ಈ ಬಗ್ಗೆ ಮಾತನಾಡಿ ಶಾಸಕ ಪುಟ್ಟರಾಜು, ಹೆದ್ದಾರಿ ಕಾಮಗಾರಿಯಿಂದ ಹಳ್ಳಿಗಾಡಿನ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದ್ರೆ ಗಮನಹರಿಸಿರಲಿಲ್ಲ, ಹೀಗಾಗಿ ನಾನು ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಇದೀಗ ಪ್ರತಾಪ್ ಸಿಂಹ ನನ್ನ ಮಾತಿಗೆ ಬೆಲೆ ಕೊಟ್ಟು ಹಾಳಾಗಿರುವ ರಸ್ತೆಗಳನ್ನು ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ. ಆದಷ್ಟು ಬೇಗ ಸರಿಪಡಿಸಬೇಕು, ಒಂದು ವೇಳೆ ತಡವಾದ್ರೆ ನಾನು ಹೋರಾಟದ ಹಾದಿಯನ್ನು ಮುಂದುವರೆಸುತ್ತೇನೆ ಎಂದರು.