ಬೆಂಗಳೂರು: ಬಾನು ಮುಷ್ತಾಕ್ (Banu Mushtaq) ದಸರಾ (Mysuru Dasara) ಉದ್ಘಾಟನೆ ಮಾಡಬಾರದು ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಹಾಗೂ ಬಿಜೆಪಿ (BJP) ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ಆಕ್ರೋಶ ಹೊರಹಾಕಿದ್ದಾರೆ.
ವಿಧಾನಸೌಧದಲ್ಲಿ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಹೆಸರು ಹೇಳದೆ ವಾಗ್ದಾಳಿ ನಡೆಸಿದರು. ಬಾನು ಮುಷ್ತಾಕ್ ಅವರನ್ನ ಚಾಮುಂಡಿ ಬೆಟ್ಟ ಹತ್ತಬಾರದು ಅಂತಾರೆ. ಪೂಜೆ ಮಾಡಬಾರದು ಅಂತಾರೆ. ನನಗೆ ಅರ್ಥ ಆಗಲ್ಲ. ನಾವು ಜಾತ್ಯಾತೀತ ವ್ಯವಸ್ಥೆಯಲ್ಲಿ ಇದ್ದೇವೆ. ಸಂವಿಧಾನ ಸಮಾನತೆ ಅಂತ ಹೇಳುತ್ತದೆ. ಅಂಬೇಡ್ಕರ್ ಇದನ್ನೇ ಹೇಳುತ್ತಾರೆ. ಇಂತಹ ಪಟ್ಟಭದ್ರ ಹಿತಾಸಕ್ತಿಗಳನ್ನ ಸಮಾಜ ಖಂಡಿಸಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ: ಸಿದ್ದರಾಮಯ್ಯ
ಮಾಜಿ ಲೋಕಸಭೆ ಸದಸ್ಯನಿಗೆ ಸಂವಿಧಾನ ಗೊತ್ತಿಲ್ಲ ಅಂದರೆ ಏನು ಹೇಳಬೇಕು ಅವನನ್ನ? ಮೂರ್ಖ ಅಂತ ಕರೆಯಬೇಕು. ಇಂತಹ ಮೂರ್ಖರು ನಮ್ನ ದೇಶದಲ್ಲಿ ಇದ್ದಾರೆ. ಇಂತಹ ಮೂರ್ಖರ ಬಗ್ಗೆ ಮಾತಾಡೋದು ಬೇಡ. ರಾಜಕೀಯ ಬೇರೆ ವಿಷಯದಲ್ಲಿ ಮಾಡಲಿ. ಇಂತಹ ವಿಷಯದಲ್ಲಿ ರಾಜಕೀಯ ಮಾಡಬಾರದು. ಜನರನ್ನ ತಪ್ಪು ದಾರಿಗೆ ಎಳೆಯೋದು ಖಂಡನೀಯ. ಇತ್ತೀಚಿನ ದಿನಗಳಲ್ಲಿ ಜಾಸ್ತಿ ಆಗುತ್ತಿದೆ. ನೋವಿನ ಸಂಗತಿ, ಇದು ಆಗಬಾರದು ಎಂದು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದಸರಾ ನಿಮಿತ್ತ ಸಿಡಿಮದ್ದು ತಾಲೀಮು – ವಿಚಲಿತಗೊಂಡ ಗಜಪಡೆಯ ಶ್ರೀಕಂಠ, ಹೇಮಾವತಿ