ಪೋಸ್ಟರ್‌ಗಳಲ್ಲಿ ಹುಲಿ ಚಿತ್ರಗಳನ್ನ ಹಾಕಿಬಿಟ್ರೆ ಮೈಸೂರು ಹುಲಿ ಆಗಿಬಿಡ್ತಾನಾ?: ಪ್ರತಾಪ್ ಸಿಂಹ

Public TV
3 Min Read
PRATAP SIMHA 1

– ಭಗತ್‍ಸಿಂಗ್, ನಾರಾಯಣಗುರು ಪಠ್ಯವನ್ನ ಕೈ ಬಿಟ್ಟಿಲ್ಲ
– ದೇಶಪ್ರೇಮದ ಪಾಠ ಭೋದಿಸುವುದೇ ಕಾಂಗ್ರೆಸ್‍ಗೆ ಸಮಸ್ಯೆಯಾಗಿದೆ

ಮೈಸೂರು: ಪೋಸ್ಟರ್‌ಗಳಲ್ಲಿ ಹುಲಿ ಚಿತ್ರಗಳನ್ನ ಹಾಕಿಬಿಟ್ರೆ ಮೈಸೂರು ಹುಲಿ ಆಗಿಬಿಡ್ತಾನಾ? ಎಂದು ಸಂಸದ ಪ್ರತಾಪ್ ಸಿಂಹ ಟಿಪ್ಪು ಸುಲ್ತಾನ್ ಬಿರುದಿನ ಬಗ್ಗೆ ಆಕ್ಷೇಪ ಹೊರಹಾಕಿದರು.

ರಾಜ್ಯದಲ್ಲಿನ ಪಠ್ಯಪುಸ್ತಕ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿನಾಕಾರಣ ಈ ವಿಚಾರದಲ್ಲಿ ವಿವಾದ ಮಾಡುತ್ತಿದೆ. ಪಠ್ಯಪುಸ್ತಕದಿಂದ ಭಗತ್‍ಸಿಂಗ್, ನಾರಾಯಣಗುರು ಅವರ ಪಠ್ಯವನ್ನ ಕೈ ಬಿಟ್ಟಿಲ್ಲ. ಕಾಂಗ್ರೆಸ್‍ಗೆ ದಿಢೀರನೆ ಭಗತ್‍ಸಿಂಗ್ ಮೇಲೆ ಯಾಕೆ ಇಷ್ಟೊಂದು ಪ್ರೀತಿ ಬಂತು ಎನ್ನುವುದು ಗೊತ್ತಾಗುತ್ತಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಭಗತ್ ಸಿಂಗ್ ಪಠ್ಯ ಮುಂದುವರಿದಿದೆ. ನಾರಾಯಣಗುರು ಅವರ ಪಠ್ಯ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ವರ್ಗಾವಣೆಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರೊನಾ ಲಸಿಕೆಯಂತೆ ಗೋಧಿ ರಫ್ತು ಮಾಡಲಾಗುದಿಲ್ಲ: ಭಾರತ

Tipu Sultan

ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್‍ಗೆ ‘ಮೈಸೂರು ಹುಲಿ’ ಎಂಬ ಟೈಟಲ್ ಕೈ ಬಿಟ್ಟ ವಿಚಾರವಾಗಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ‘ಮೈಸೂರು ಹುಲಿ’ ಯಾವಾಗ ಆಗಿದ್ದಾ? ಯಾವ ಹುಲಿ ಕೊಂದಿದ್ದ. ಪೋಸ್ಟರ್‌ಗಳಲ್ಲಿ ಹುಲಿ ಚಿತ್ರಗಳನ್ನ ಹಾಕಿಬಿಟ್ರೆ ಮೈಸೂರು ಹುಲಿ ಆಗಿಬಿಡ್ತಾನಾ? ಮೂರನೇ ಮತ್ತು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಯಾವ ರಣರಂಗದಲ್ಲಿ ಹೋರಾಟ ಮಾಡ್ದಾ ಎಂದು ಪ್ರಶ್ನೆ ಮಾಡಿದರು.

ಟಿಪ್ಪು ಸುಲ್ತಾನ್ ಕೋಟೆಯೊಳಗೆ ಸತ್ತಿದ್ದು, ಹುಲಿ ಎಂದಿಗೂ ಬೋನ್‍ನಲ್ಲಿ ಸಾಯೋಲ್ಲ. ಟಿಪ್ಪು ಸುಲ್ತಾನ್ ಯುದ್ಧ ಮಾಡದೆ ಸಂಧಾನಕ್ಕೆ ಕಳುಹಿಸಿದ್ದ. ನಾಲ್ಕನೇ ಆಗ್ಲೋ ಮೈಸೂರು ಯುದ್ಧದಲ್ಲಿ ಹುಲಿ ಎಲ್ಲಿತ್ತು. ಕೋಟೆಯೊಳಗೆ ಸತ್ತು ಬಿದ್ದಿತ್ತು. ಯಾರೋ ನಾಲ್ಕು ಜನ ಟಿಪ್ಪು ಸುಲ್ತಾನ್ ಹುಲಿ ಅಂದ್ರು. ಟಿಪ್ಪು ಸುಲ್ತಾನ್ ಮೈಸೂರು ಹುಲಿ ಅಲ್ಲ. ಎಂದಿಗೂ ಮೈಸೂರು ಹುಲಿ ನಾಲ್ವಡಿ ಕೃಷ್ಣರಾಜ ಒಡೆಯರ್. ನಮ್ಮ ಹುಲಿ ಕೆ.ಆರ್.ಎಸ್ ಕಟ್ಟಿದೆ. ಬೆಂಗಳೂರಿಗೆ ಕರೆಂಟ್ ಕೊಟ್ರು. ಅವರೇ ಎಂದಿಗೂ ನಮ್ಮ ಹುಲಿ ಎಂದರು.

RSS LEDER

ಆರ್‌ಎಸ್‍ಎಸ್ ಸಂಸ್ಥಾಪಕ ಹೆಡ್ಗೆವಾರ್ ಅವರ ಪಠ್ಯ ಯಾಕೆ ಇರಬಾರದು? ಅವರು ದೇಶಪ್ರೇಮದ ಬಗ್ಗೆ ಮಾಡಿದ ಭಾಷಣ ಮಕ್ಕಳಿಗೆ ಸ್ಪೂರ್ತಿಯಾಗಲು ಪಠ್ಯದಲ್ಲಿ ಅಳವಡಿಸಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದರು. ಚಕ್ರವರ್ತಿ ಸೂಲಿಬೆಲೆ ಒಬ್ಬ ಶ್ರೇಷ್ಠ ವಾಗ್ಮಿ. ಅವರು ರಚಿಸಿದ ಪಠ್ಯ ಮಕ್ಕಳಿಗೆ ದೇಶಪ್ರೇಮ ತುಂಬಲಿದೆ. ‘ತಾಯಿ ಭಾರತೀಯ ಅಮರ ಪುತ್ರರು’ ಎಂಬ ಪಠ್ಯ ದೇಶಪ್ರೇಮ ಬೆಳಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‍ನವರು ಇದರಲ್ಲಿಯೂ ತಪ್ಪು ಹುಡುಕುವುದು ಯಾಕೆ? ಬೋಲೋ ಭಾರತ್ ಮಾತಕೀ ಜೈ ಅನ್ನೊದಕ್ಕೂ ಕಾಂಗ್ರೆಸ್‍ಗೆ ಸಮಸ್ಯೆ ಇದೆ. ದೇಶಪ್ರೇಮದ ಪಾಠ ಭೋದಿಸುವುದೇ ಕಾಂಗ್ರೆಸ್‍ಗೆ ಸಮಸ್ಯೆಯಾಗಿದೆ. ಕಾಂಗ್ರೆಸ್ ಯಾವಾಗಲೂ ದೇಶ ವಿರೋಧಿಯಾಗಿಯೇ ವರ್ತಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

Congress BJP Flag

ಮೈಸೂರು ನಗರದ ರಸ್ತೆಗಳು ಗುಂಡಿಬಿದ್ದ ವಿಚಾರವಾಗಿ ಮಾತನಾಡಿದ ಅವರು, ಕೆಲ ಪಾಲಿಕೆ ಸದಸ್ಯರಿಗೆ ರಸ್ತೆ ಗುಂಡಿ ಮುಚ್ಚುವ ಕನಿಷ್ಠ ಜ್ಞಾನವಿಲ್ಲ. ಗುಂಡಿಗಳಿಗೆ ಮಣ್ಣು ಹಾಕಿದ್ದಾರೆ, ಮಳೆಗೆ ಮತ್ತೆ ಮಣ್ಣು ಕೊಚ್ಚಿ ಹೋಗುತ್ತಿದೆ. ಅದಕ್ಕೆ ಸಾರ್ವಜನಿಕರಿಗೆ ಹೇಳ್ತಿದ್ದೇನೆ. ನಿಮ್ಮ ಮನೆಯ ರಸ್ತೆ ಸರಿ ಇಲ್ವಾ? ನೀರು ಬರ್ತಿಲ್ವಾ, ಕಸ ತೆಗೆದಿಲ್ವಾ? ಪಾಲಿಕೆ ಸದಸ್ಯರ ಮನೆ ಮುಂದೆ ಧರಣಿ ಕೂತುಕೊಳ್ಳಿ. ಸಾರ್ವಜನಿಕರು ಜನಪ್ರತಿನಿಧಿಗಳ ಅಡಿಯಾಳುಗಳಲ್ಲ. ಅವರ ಮನೆ ಮುಂದೆ ಹೋಗಿ ಧರಣಿ ಮಾಡಿ ಬಿಸಿ ಮುಟ್ಟಿಸಿ. ಆಗ ಅವರೇ ರಸ್ತೆಗೆ ಬಂದು ಕೆಲಸ ಮಾಡ್ತಾರೆ ಎಂದು ಪಾಲಿಕೆ ಸದಸ್ಯರ ವಿರುದ್ಧ ಕಿಡಿಕಾರಿದರು.

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆದ್ರೆ ದಲಿತರ ಸಾಲ ಮನ್ನಾ ಮಾಡುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರು, ಯಾವ ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂಬುದು ನನಗ ಗೊತ್ತಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಮಾಡಿದ್ರು? ಡಾ.ಜಿ.ಪರಮೇಶ್ವರ್ ಸಿಎಂ ಆಗುವುದನ್ನ ತಪ್ಪಿಸಿದ್ದೆ ಸಿದ್ದರಾಮಯ್ಯ ಅವರು ದಲಿತರಿಗೆ ಕೊಟ್ಟ ಕೊಡುಗೆ. ಪರಮೇಶ್ವರ್ ಅವರು ಅಂಗಾಲಾಚಿದರು ಮಂತ್ರಿ ಸ್ಥಾನವನ್ನು ಕೊಡಲಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಭಾರೀ ಮಳೆಗೆ ಕೊಚ್ಚಿ ಹೋಯ್ತು ಬೆಂಗಳೂರು -ಮೈಸೂರು ಹೆದ್ದಾರಿ – ಟ್ರಾಫಿಕ್ ಜ್ಯಾಮ್ 

ಕೋಲಾರದಲ್ಲಿ ಮುನಿಯಪ್ಪ ಹಾಗೂ ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದೇ ಸಿದ್ದರಾಮಯ್ಯ ದಲಿತರಿಗೆ ಕೊಟ್ಟ ಕೊಡುಗೆ. ದಲಿತ ಸಮಾಜ ಪ್ರಜ್ಞಾವಂತ ಸಮಾಜ. ಸಿದ್ದರಾಮಯ್ಯ ಅವರಿಗೆ ಮುಸ್ಲಿಮರ ಬಗ್ಗೆ ಮಾತ್ರ ವಿಶೇಷ ಕಾಳಜಿ ಇದೆ, ಹೊರತು ದಲಿತ ಸಮಾಜದ ಮೇಲಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *