LatestMain PostNational

ಮೋದಿ, ನಿತೀಶ್ ಗೆಲ್ಲಿಸಿದ್ದ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ವರ್ಕೌಟ್ ಆಗ್ಲಿಲ್ಲ!

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲ್ಲಿಸಿದ್ದ, ಬಿಹಾರ ಚುನಾವಣೆಯಲ್ಲಿ ಜೆಡಿಯು ಗೆಲುವಿನ ರೂವಾರಿಯಾಗಿದ್ದ ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಉತ್ತರಪ್ರದೇಶಲ್ಲಿ ವಿಫಲವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಮೋದಿ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡು ಗೆಲುವಿನ ರೂವಾರಿಯಾಗಿದ್ರು. ಈ ಕಾರಣಕ್ಕಾಗಿ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು.

ಪ್ರಶಾಂತ್ ಕಿಶೋರ್ ಅವರನ್ನು ನೇಮಿಸಿದ್ದಕ್ಕೆ ಆರಂಭದಲ್ಲೇ ಪಕ್ಷದ ಹಿರಿಯ ನಾಯಕರು ಅಪಸ್ವರ ಎತ್ತಿದ್ದರು. ನಮ್ಮ ಮಾತಿಗೆ ಬೆಲೆ ನೀಡದೇ ಪ್ರಶಾಂತ್ ಕಿಶೋರ್ ಮಾತಿಗೆ ಹೈಕಮಾಂಡ್ ಬೆಲೆ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಹಿರಿಯ ನಾಯಕರೇ ಅಸಮಾಧಾನ ಹೊರ ಹಾಕಿದ್ದರೂ ಎಸ್‍ಪಿ, ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲು ಪ್ರಶಾಂತ್ ಕಿಶೋರ್ ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ ಮೋದಿ ಅಲೆಯಲ್ಲಿ ಎಸ್‍ಪಿ ಮತ್ತು ಕಾಂಗ್ರೆಸ್ ಕೊಚ್ಚಿಕೊಂಡು ಹೋಗಿದೆ. ಈ ಮೂಲಕ ಎರಡು ಚುನಾವಣೆಯಲ್ಲಿ ಯಶಸ್ವಿಯಾಗಿದ್ದ ಪ್ರಶಾಂತ್ ಕಿಶೋರ್‍ಗೆ ಮೂರನೇ ಚುನಾವಣೆಯಲ್ಲಿ ಸೋಲಾಗಿದೆ.

ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಈ ಬಾರಿ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಬೇಕೆಂದು ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಕೆಲ ತಿಂಗಳ ಹಿಂದೆ ಪ್ರಕಟವಾಗಿತ್ತು.

ಲೋಕಸಭಾ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಬಿಹಾರದಲ್ಲಿ ಮಹಾಘಟ್‍ಬಂಧನ್ ಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು.

Leave a Reply

Your email address will not be published. Required fields are marked *

Back to top button