ನವದೆಹಲಿ: ಪಂಚರಾಜ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಮತ್ತೆ ಪುಟಿದೇಳಲು ಪ್ರಯತ್ನಿಸುತ್ತಿದೆ. ಈ ಸಂಬಂಧ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಆರಂಭಿಸಿದೆ.
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆಗೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಇಂದು ಮೂರನೇ ಹಂತದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಕೆಸಿ ವೇಣುಗೋಪಾಲ್, ಮುಕುಲ್ ವಾಸ್ನಿಕ್, ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್, ಅಂಬಿಕಾ ಸೋನಿ, ಎಕೆ ಆಂಟನಿ, ರಣದೀಪ್ ಸುರ್ಜೆವಾಲಾ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಭಾರತ ಶ್ರೇಷ್ಠ ವೈವಿಧ್ಯತೆ ದೇಶ, ಎಲ್ಲರ ಬಗ್ಗೆಯೂ ಸಹಿಷ್ಣುತೆ ಹೊಂದಬೇಕು – ಅಲಹಾಬಾದ್ ಹೈಕೋರ್ಟ್
ಒಂದೇ ವಾರದಲ್ಲಿ ನಡೆಯುತ್ತಿರುವ ಮೂರನೇ ಸಭೆ ಇದಾಗಿದೆ. ಇದಕ್ಕೂ ಮೊದಲು ಏಪ್ರಿಲ್ 16 ಮತ್ತು 18 ರಂದು ಸೋನಿಯಾಗಾಂಧಿ ಜೊತೆಗೆ ಪ್ರಶಾಂತ್ ಕಿಶೋರ್ ಸಭೆ ನಡೆಸಿದ್ದರು. ಮುಂದಿನ ದಿನಗಳಲ್ಲಿ ಇಂತಹ ಇನ್ನೆರಡು ಸಭೆಗಳು ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಪ್ರಶಾಂತ್ ಕಿಶೋರ್ 2024ರ ಚುನಾವಣೆಗೆ ಸಂಬಂಧಿಸಿದಂತೆ ಪವರ್ ಪಾಯಿಂಟ್ ನೀಡಿದ್ದು ಇಂದು ಹೊಸ ಅಂಶಗಳೊಂದಿಗೆ ಹೆಚ್ಚಿನ ಚರ್ಚೆ ನಡೆಯಲಿದೆ. ಈ ನಡುವೆ ಕಾಂಗ್ರೆಸ್‌ನಲ್ಲಿ ಪ್ರಶಾಂತ್ ಕಿಶೋರ್ ಪಾತ್ರ ಏನು ಎಂದು ಇನ್ನೊಂದು ವಾರದಲ್ಲಿ ತಿಳಿಯಲಿದೆ ಎಂದು ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ. ಇದನ್ನೂ ಓದಿ: ಧಾರ್ಮಿಕ ಮೆರವಣಿಗೆಗೂ ಮುನ್ನ ಆಯೋಜಕರಿಂದ ಅಫಿಡವಿಟ್ ಕಡ್ಡಾಯ
ಉತ್ತರ ಪ್ರದೇಶ, ಬಿಹಾರ, ಒಡಿಶಾದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಬೇಕು. ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಮೈತ್ರಿ ಮಾಡಿಕೊಳ್ಳಬೇಕು ಎಂದು ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 370 ಕ್ಷೇತ್ರಗಳ ಮೇಲೆ ಪ್ರಶಾಂತ್ ಕಿಶೋರ್ ಗಮನಹರಿಸಿದ್ದಾರೆ.