-ಕೋರ್ಟ್ ನಲ್ಲಿ ಅಮೃತಾ ಹೇಳಿದ್ದೇನು?
ಹೈದರಾಬಾದ್: ಇಡೀ ದೇಶದಲ್ಲಿ ಸಂಚಲನ ಹುಟ್ಟು ಹಾಕಿದ್ದ ಪ್ರಣಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ತಿರಸ್ಕರಿಸಿ ನ್ಯಾಯಾಂಗ ಬಂಧನವನ್ನು ಮುಂದುವರೆಸುವಂತೆ ಆದೇಶಿಸಿದೆ.
ಆರೋಪಿಗಳಾದ ಪ್ರಣಯ್ ಮಾವ ಮಾರುತಿ ರಾವ್, ಅಸ್ಗರ್ ಅಲಿ, ಮೊಹಮ್ಮದ್ ಅಬುಲ್ ಬರಿ, ಟಿ.ಶರವಣ ಮತ್ತು ಎಸ್.ಶಿವ ಆರೋಪಿಗಳು ತೆಲಂಗಾಣದ ನಾಲ್ಗೊಂಡ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಅಮೃತಾ ಹೇಳಿದ್ದೇನು?
ಗರ್ಭಿಣಿ ಅಮೃತಾ, ಪ್ರಣಯ್ ತಂದೆ ಬಾಲಸ್ವಾಮಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ಮೊದಲ ಆರೋಪಿಯಾಗಿರುವ ನಮ್ಮ ತಂದೆ ಮಾರುತಿ ರಾವ್ ಗೆ ಜಾಮೀನು ನೀಡಬಾರದು. ಆತ ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಹಣ ಬಲ ಬಳಸಿ ನನಗೂ ಮತ್ತು ನನ್ನ ಮಗುವಿಗೆಸ ತೊಂದರೆ ಮಾಡುವ ಸಾಧ್ಯತೆಗಳಿವೆ. ತಂದೆ ಕೋಪಿಷ್ಟನಾಗಿದ್ದು ತಾಳ್ಮೆ ಕಳೆದುಕೊಳ್ಳುತ್ತಿರುತ್ತಾನೆ. ಬಂಧನಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡುತ್ತಿರುವಾಗ ಎಷ್ಟು ಕೋಪಿಷ್ಠ ಎಂಬುವುದು ಸಾಬೀತಾಗಿದೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳು ನಿಮ್ಮ ಮುಂದಿವೆ ಅಂತಾ ಅಮೃತ ನ್ಯಾಯಾಲಯದ ಮುಂದೆ ಹೇಳಿದ್ದರು.
ಸರ್ಕಾರ ಪರ ವಕೀಲರು ಸಹ ಆರೋಪಿಗಳಿಗೆ ಜಾಮೀನು ನೀಡಬಾರದು. ಸಾಕ್ಷ್ಯಗಳನ್ನು ನಾಶಗೊಳಿಸುವ ಸಾಧ್ಯತೆಗಳಿವೆ ಎಂಬ ವಾದ ಮಂಡಿಸಿದ್ದರು. ಪ್ರಣಯ್ ಮತ್ತು ಅಮೃತಾ ಇಬ್ಬರು ಪ್ರೀತಿಸಿ ಜನೆವರಿಯಲ್ಲಿ ಮದುವೆ ಆಗಿದ್ದರು. ಪ್ರಣಯ್ ಓರ್ವ ದಲಿತ ಯುವಕ ಎಂದು ಅಮೃತಾ ತಂದೆ 1 ಕೋಟಿ ರೂ.ಗೆ ಸುಪಾರಿ ನೀಡಿ ಕೊಲ್ಲಿಸಿದ್ದನು. ಹಂತಕ ಪ್ರಣಯ್ ನನ್ನು ಕೊಲ್ಲುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹಂತಕ ಬಿಹಾರ ಮೂಲದ ಸುಭಾಶ್ ಶರ್ಮಾ ಆಗಿದ್ದು, ಆತ ಈಗ ರಾಜಮಂಡ್ರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಮಾರುತಿ ರಾವ್ ಅಳಿಯನನ್ನು ಕೊಲ್ಲಲು ಅಸ್ಗರ್ ಅಲಿ ಮತ್ತು ಮೊಹಮ್ಮದ್ ಅಬುಲ್ ಬರಿ ಇಬ್ಬರನ್ನು ಸಂಪರ್ಕಿಸಿದ್ದನು. ಇಬ್ಬರು ಪ್ರಣಯ್ ಕೊಲ್ಲಲು ಮೊದಲಿಗೆ 2 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಮೂವರ ಮಧ್ಯೆ 1 ಕೋಟಿ ರೂ.ಗೆ ಒಪ್ಪಂದವಾಗಿತ್ತು. ಕೊಲೆಗೂ ಮುನ್ನ ಮಾರುತಿ ರಾವ್ ಹಂತಕರಿಗೆ 15 ಲಕ್ಷ ರೂ. ನೀಡಿದ್ದ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv