ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಂಬೂಸವಾರಿ ನಡೆಯುತ್ತಿದ್ದ ವೇಳೆ ಅಂಬಾರಿ ವಾಲಿದ್ದು, ಅದನ್ನು ಸರಿ ಮಾಡಲು ರಾಜಮಾತೆ ಪ್ರಮೋದಾದೇವಿ ಕೈಸನ್ನೆ ಮಾಡಿದ್ದರು.
ಮಂಗಳವಾರ ಗಜಪಡೆ ನಾಯಕ ಅರ್ಜುನ ಅಂಬಾರಿ ಹೊತ್ತು ಜಂಬೂಸವಾರಿ ಆರಂಭಿಸಿದ ವೇಳೆ ಅಂಬಾರಿ ಕೊಂಚ ವಾಲಿತ್ತು. ಈ ವೇಳೆ ಅರಮನೆಯಿಂದ ಜಂಬೂಸವಾರಿ ವೀಕ್ಷಿಸಲು ನಿಂತಿದ್ದ ರಾಜಮಾತೆ ಪ್ರಮೋದಾದೇವಿ ಗಜಪಡೆ ಬಳಿ ಇದ್ದ ಸಿಬ್ಬಂದಿಗೆ ಅದನ್ನು ಸರಿ ಮಾಡುವಂತೆ ಕೈಸನ್ನೆ ಮಾಡಿದ್ದರು. ಈ ದೃಶ್ಯಾವಳಿಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
Advertisement
Advertisement
ನಂತರ ಹಗ್ಗದ ಸಹಾಯದಿಂದ ಆರಂಭದಿಂದ ಕೊನೆಯವರೆಗೂ ಜಂಬೂಸವಾರಿ ನಡೆದು ಯಶಸ್ವಿಯಾಗಿ ಪೂರ್ಣಗೊಂಡಿತು. ಸಿಎಂ ಯಡಿಯೂರಪ್ಪ ಅವರು ಪುಷ್ಪಾರ್ಚನೆ ಮಾಡುತ್ತಿದ್ದ ವೇಳೆಯೂ ಅಂಬಾರಿಗೆ ಹಗ್ಗದ ಸಪೋರ್ಟ್ ನೀಡಲಾಗಿತ್ತು. ನಾಡಹಬ್ಬ ದಸರಾದಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಅಂಬಾರಿ ವಾಲಿದರೆ ನಾಡಿಗೆ ಕೆಡಕಾಗುತ್ತಾ ಎಂಬ ಆತಂಕ ಇದೀಗ ಶುರುವಾಗಿದೆ.
Advertisement
Advertisement
750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ನಾಯಕ ಅರ್ಜುನ ಗಜಪಡೆ ಜೊತೆ ಹೆಜ್ಜೆ ಹಾಕಿ ದಸರಾವನ್ನು ಯಶಸ್ವಿಯಾಗಿದ್ದಾನೆ. ಅರಮನೆ ಉತ್ತರ ದ್ವಾರವಾದ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.09ಕ್ಕೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಸಂಜೆ 4.17ರ ಶುಭ ಕುಂಬ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದರು.
ಜಂಬೂ ಸವಾರಿಯಲ್ಲಿ 8ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಸಾಗಿದ್ದನು. ಈ ಜಂಬೂಸವಾರಿಯಲ್ಲಿ 39 ಸ್ತಬ್ಧ ಚಿತ್ರಗಳು, ವಿವಿಧ ಜಾನಪದ ಕಲಾತಂಡಗಳು, 100ಕ್ಕೂ ಹೆಚ್ಚು ಕಲಾ ತಂಡಗಳು, ಉತ್ತರ ಭಾರತದ ವಿವಿಧ ರಾಜ್ಯಗಳ 5 ಕಲಾ ತಂಡ, 1,675 ಕಲಾವಿದರು ಸೇರಿದಂತೆ ಒಟ್ಟು 2 ಸಾವಿರ ಮಂದಿ ಭಾಗಿಯಾಗಿದ್ದವು.
ಸಂಜೆ 4.30ಕ್ಕೆ ಹೊರಟ ಅಂಬಾರಿ ಸಂಜೆ 7 ಗಂಟೆಗೆ ಬನ್ನಿ ಮಂಟಪ ತಲುಪಿ, ಇತ್ತ ರಾತ್ರಿ 7.30ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತಿನ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಂಜನ್ನು ಹಿಡಿದು ಸಾಹಸ ಪ್ರದರ್ಶಿಸಿದರು. ಈ ಪಂಜಿನ ಕವಾಯತಿನ ಬಳಿಕ ರಾತ್ರಿ 10 ಗಂಟೆಗೆ ಪಟಾಕಿ ಸಿಡಿಸೋ ಮೂಲಕ ದಸರಾ ಯಶಸ್ವಿ ತೆರೆಕಂಡಿದೆ.