ಹುಬ್ಬಳ್ಳಿ: ವಿರೋಧಿಗಳ ಷಡ್ಯಂತ್ರದಿಂದ ಪ್ರಯಾಗ್‌ರಾಜ್‌ನಲ್ಲಿ ಇಂತಹ ಘಟನೆ ನಡೆದಿದೆ. ನ್ಯಾಯಾಂಗ ತನಿಖೆಯಿಂದ ಅಲ್ಲಿ ನಡೆದಿರುವ ಷಡ್ಯಂತ್ರ ಹೊರಗಡೆ ಬರಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಒತ್ತಾಯಿಸಿದ್ದಾರೆ.
ಕುಂಭಮೇಳದಲ್ಲಿ ಕಾಲ್ತುಳಿತ (Kumbh Mela Stampede) ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಈ ಕೃತ್ಯ ಎಸಗಿದ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ಘಟನೆ ಅತ್ಯಂತ ಖೇದಕರವಾಗಿದ್ದು, ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ 30 ಮಂದಿ ಬಲಿ – ಇಂದು ಪ್ರಯಾಗ್‌ರಾಜ್‌ಗೆ ಯೋಗಿ ಭೇಟಿ
ನಾವು ಈಗಾಗಲೇ ಪ್ರಯಾಗ್‌ರಾಜ್ ಪ್ರಯಾಣ ಮಾಡಿ ಬಂದಿದ್ದೇವೆ. ಅಲ್ಲಿ ಬಹಳಷ್ಟು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಕೋಟಿಗಟ್ಟಲೇ ಜನರಿಗೆ ವ್ಯವಸ್ಥೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಮೌನಿ ಅಮಾವಾಸ್ಯೆ ದಿನ ಎಂಟು ಕೋಟಿ ಜನರು ಸ್ನಾನಕ್ಕೆ ಬಂದಿದ್ದರು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಇಂತಹ ಘಟನೆ ಆಗಬಾರದು, ಈಗ ನಡೆದು ಹೋಗಿದೆ. ಇದಕ್ಕೆ ವಿರೋಧ ಪಕ್ಷದವರು ಬೇರೆ ಬೇರೆ ನಾಟಕವನ್ನ ಆಡುತ್ತಿದ್ದಾರೆ. ಈ ಹಿಂದೆ ನೆಹರೂ ಅಲ್ಲಿಯ ಕುಂಭಮೇಳಕ್ಕೆ ಬಂದಾಗ ನೂಕುನುಗ್ಗಲು ನಡೆದು 800 ಜನರು ಸಾವನ್ನಪ್ಪಿದ್ದರು. ಕಾಂಗ್ರೆಸ್‌ನವರು 800 ಜನರನ್ನ ಕೊಂದು ಹಾಕಿದ್ದಾರೆ. ಅಖಿಲೇಶ್ ಅವರೇ 2013 ರಲ್ಲಿ ಕುಂಭಮೇಳವಾದಾಗ ಸಾವಾಗಿವೆ. ಈ ಸಾವಿನಲ್ಲಿ ರಾಜಕೀಯ ಮಾಡಬಾರದು ಎಂದು ಮುತಾಲಿಕ್ ತಿಳಿಸಿದ್ದಾರೆ. ಇದನ್ನೂ ಓದಿ: ಕುಂಭಮೇಳ ಕಾಲ್ತುಳಿತ ದುರಂತ – ಕನ್ನಡಿಗರ ನೆರವಿಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ