Connect with us

Karnataka

ನನ್ನಂತೆ ಸೂಲಿಬೆಲೆಯನ್ನೂ ಮೂಲೆಗುಂಪು ಮಾಡಬೇಡಿ: ಮುತಾಲಿಕ್

Published

on

ಉಡುಪಿ: ನನ್ನನ್ನು ಮೂಲೆಗುಂಪು ಮಾಡಿದಂತೆ ಚಕ್ರವರ್ತಿ ಸೂಲಿಬೆಲೆಯನ್ನು ಪಕ್ಕಕ್ಕೆ ಸರಿಸಬೇಡಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬಿಜೆಪಿಗರಿಗೆ ಚಾಟಿ ಬೀಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ದೇಶದ್ರೋಹಿ ಅಂದದ್ದು ತಪ್ಪು, ದೇಶದ್ರೋಹಿ ಪಟ್ಟ ಕಟ್ಟಿದ್ದು ಮೂರ್ಖತನ. ಚಕ್ರವರ್ತಿ ಸೂಲಿಬೆಲೆಯವರಿಗೆ ನೆರೆ ಪರಿಹಾರ ವಿಚಾರದಲ್ಲಿ ನೋವಿದ್ದರಿಂದ ಮಾತನಾಡಿದ್ದಾರೆ. ಚಕ್ರವರ್ತಿ ಸೂಲಿಬೆಲೆಯನ್ನು ನಾನು ಬೆಂಬಲಿಸುತ್ತೇನೆ ಎಂದರು.

ಕರ್ನಾಟಕದ ಸಂಸದರ ಗೆಲುವಿನ ಹಿಂದೆ ಸೂಲಿಬೆಲೆ ಪರಿಶ್ರಮ ಇದೆ. ನಾನು ಕೂಡಾ 2000ನೇ ಇಸವಿಯಿಂದ ಮೋದಿ ಪರ ಭಾಷಣ ಮಾಡಿದವನು. ಆದರೆ ನನ್ನನ್ನೇ ಮೂಲೆಗುಂಪು ಮಾಡುವ ಪ್ರಯತ್ನ ನಡೆದಿತ್ತು. ಇದೀಗ ಸೂಲಿಬೆಲೆಯನ್ನು ಪಕ್ಕಕ್ಕೆ ಸರಿಸುವ ಪ್ರಯತ್ನ ಸರಿಯಲ್ಲ. ವಾಗ್ಮಿ, ಚಿಂತಕ, ಪರಿಸರ ಪರ ಹೋರಾಟಗಾರನಿಗೆ ನೋವು ಕೊಡುವುದು ಸರಿಯಲ್ಲ. ರಾಜಕೀಯದವರು ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆ. ಸಂಘ ಪರಿವಾರ ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.

ನೆರೆ ಪರಿಹಾರ ತಡ ಆಯಿತು, ಕಡಿಮೆ ಆಯಿತು ಎಂಬುದು ಸಾಮಾನ್ಯ ಜನರಿಗೂ ಗಮನಕ್ಕೆ ಬರುತ್ತಿದೆ. ಯಡಿಯೂರಪ್ಪನವರಿಗೆ ಆ ನೋವು ಇದ್ದೆ ಇದೆ. 1,200 ಕೋಟಿ ರೂ. ಪರಿಹಾರ ಎಲ್ಲಿಗೂ ಸಾಕಾಗುವುದಿಲ್ಲ ಮುಂದೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ದತ್ತಪೀಠಕ್ಕೆ ರಾಹುಲ್ ಕೌಲ್
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನೂರಕ್ಕೆ ನೂರು ನಮಗೆ ವಿಶ್ವಾಸವಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭರವಸೆ ವ್ಯಕ್ತಪಡಿಸಿದರು.

70 ವರ್ಷ ಕಾಂಗ್ರೆಸ್ ವ್ಯವಸ್ಥಿತವಾಗಿ ಕೇಸನ್ನು ಮುಚ್ಚಿ ಹಾಕಿತ್ತು. ಮುಸ್ಲಿಮರನ್ನು ಎತ್ತಿಕಟ್ಟುವ ಷಡ್ಯಂತ್ರ ಮಾಡಿತ್ತು. ಈಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸರಿಯಾದ ವಿಚಾರಣೆ ನಡೆಸುತ್ತಿದ್ದಾರೆ. ದೇವಸ್ಥಾನ ಅಲ್ಲಿ ಇತ್ತು, ಮತ್ತೆ ನಮಗೆ ಜಮೀನು ವಾಪಾಸ್ ಸಿಗುತ್ತೆ ಎಂಬ ನಂಬಿಕೆಯಿದೆ ಎಂದು ಅವರು ಹೇಳಿದರು.

ಅಕ್ಟೋಬರ್ 13 ರಂದು ದತ್ತಮಾಲಾ ಅಭಿಯಾನ ನಡೆಯಲಿದೆ. 5 ಸಾವಿರ ಜನ ಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆಯಿದೆ 1990ರ ಗಲಭೆಯಲ್ಲಿ ತಪ್ಪಿಸಿಕೊಂಡ ಜಮ್ಮು ಕಾಶ್ಮೀರದ ಹೋರಾಟಗಾರ, ರಾಹುಲ್ ಕೌಲ್ ದತ್ತಪೀಠಕ್ಕೆ ಆಗಮಿಸುತ್ತಾರೆ. 370ನೇ ವಿಧಿ ರದ್ದು ಮಾಡಿದಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರಕ್ಕೆ ದತ್ತಪೀಠದಿಂದ ಅಭಿನಂದನೆ ಸಲ್ಲಿಸಲಿದ್ದಾರೆ. ಸ್ವತಃ ಅವರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Click to comment

Leave a Reply

Your email address will not be published. Required fields are marked *