– ಗೋ ರಕ್ಷಕ ಶಿವು ಹತ್ಯೆ ಪ್ರಕರಣ ಹಿನ್ನೆಲೆ ಬಿಜೆಪಿ ವಿರುದ್ಧ ಕಿಡಿ
ಯಾದಗಿರಿ: ಚುನಾವಣೆಯಲ್ಲಿ ಹೆಣಗಳ ಮೇಲೆ ರಾಜಕೀಯ ಮಾಡಿದ ಬಿಜೆಪಿ ಅವರು ಈಗ ಕತ್ತೆ ಕಾಯುತ್ತಿದ್ದೀರಾ? ಚುನಾವಣೆ ಬಳಿಕ ಬಾಯಿ ಬಂದಾಯ್ತ ಎಂದು ಗೋ ರಕ್ಷಕ ಶಿವು ಹತ್ಯೆ ಪ್ರಕರಣದಲ್ಲಿ ಧ್ವನಿ ಎತ್ತದ ಬಿಜೆಪಿ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿಗೆ ಬೆಳಗಾವಿಯಲ್ಲಿ ಗೋ ರಕ್ಷಕ ಶಿವಕುಮಾರ್ ಉಪ್ಪಾರರನ್ನು ಕೊಲೆ ಮಾಡಲಾಗಿದೆ. ಇದರ ಬಗ್ಗೆ ಯಾವುದೇ ತನಿಖೆ ನಡೆಸದೇ ಪ್ರಕರಣ ಮುಚ್ಚು ಹಾಕುವ ಪ್ರಯತ್ನ ನಡೆಯತ್ತಿದೆ. ಬಿಜೆಪಿ ಎಂಎಲ್‍ಎ, ಎಂಪಿಗಳು ಏನೂ ಕತ್ತೆ ಕಾಯುತ್ತಿದ್ದೀರಾ? ಚುನಾವಣೆ ವೇಳೆ ಹೆಣಗಳ ಮೇಲೆ ರಾಜಕೀಯ ಮಾಡುತ್ತೀರಾ? ಚುನಾವಣೆ ಮುಗಿದ ಬಳಿಕ ನಿಮ್ಮ ಬಾಯಿ ಬಂದಾಯ್ತ? ಒಬ್ಬರಾದರೂ ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದೀರಾ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ಮುಸ್ಲಿಂ ಸಮುದಾಯದವರಿಗೆ ಆಗಿದ್ದರೆ ಕೋಮುವಾದಿಗಳ ಕೃತ್ಯ, ಶ್ರೀರಾಮಸೇನೆ, ಭಜರಂಗದಳ ಕೃತ್ಯ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಈ ಪ್ರಕರಣವನ್ನು ಸರ್ಕಾರ ಮುಚ್ಚಿಹಾಕಲು ಪ್ರಯತ್ನಿಸಿದರೆ ರಾಜ್ಯಾದ್ಯಂದ ಉಗ್ರ ಹೋರಾಟ ಮಾಡಬೇಕುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋ ರಕ್ಷಕ ಶಿವು ಪ್ರಕರಣವನ್ನು ಸರಿಯಾದ ತನಿಖೆ ನಡೆಸಿ, ಸತ್ಯಾಂಶ ಬಹಿರಂಗ ಪಡಿಸದೆ ಹೋದರೆ ಬಿಜೆಪಿ ಶಾಸಕರು ಹಾಗೂ ಸಂಸದರ ಮನೆ ಮುಂದೆ ಧರಣಿ ಕೂರುತ್ತೇವೆ ಎಂದು ಅವರು ತಿಳಿಸಿದರು.