ಚಿಕ್ಕಮಗಳೂರು : ಹಿಂದುತ್ವ-ಗೋಮಾತೆ ಅಂತ ಮಾತನಾಡುವ ಬಿಜೆಪಿಯವರು ಯಾರಾದರೂ ಮನೆಯಲ್ಲಿ ದನಗಳನ್ನ ಸಾಕಿದ್ದರೆ ಹೇಳಿ, ಅವರ ಮನೆಗೆ ಭೇಟಿ ನೀಡಬೇಕೆಂಬ ಆಸೆ ನನಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿರುವ ನಾಯಕರು ಯಾರಾದರೂ ದನಗಳು, ಗಂಡು ಕರು, ಹೋರಿ ಹಾಗೂ ಬಂಜೆ ದನಗಳನ್ನ ಸಾಕಿದ್ದರೆ ನನಗೆ ತಿಳಿಸಿ, ನಿಮ್ಮ ಮನೆಗೆ ಒಮ್ಮೆ ಭೇಟಿ ನೀಡಬೇಕೆಂಬ ಆಸೆ ಇದೆ ಎಂದರು. ಬಳಿಕ “ಐ ಆಯಮ್ ಸೆಕ್ಯೂಲರ್ ಬೈ ಹಾರ್ಟ್ ಅಂಡ್ ಥಾಟ್” ನಾನು ಜಾತ್ಯಾತೀತ ವ್ಯಕ್ತಿ. ಅದರ ಬಗ್ಗೆ ಯಾರಿಗೂ ಅನುಮಾನವೇ ಬೇಡ. ಎಲ್ಲಾ ಜಾತಿ, ಧರ್ಮದವರನ್ನ ಸಮಾನವಾಗಿ ನಾನು ಪ್ರೀತಿಸುತ್ತೇನೆ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಎಂದು ನಾನು ಬೇಧ ಭಾವ ಮಾಡಲ್ಲ. ನನ್ನ ಬಳಿ 2004ರಿಂದ ಗೋಶಾಲೆ ಇದೆ. ನನ್ನ ಬಳಿ ಇರೋ ಹಸುಗಳು ಗಂಡು ಕರು ಹಾಕಿದಾಗಲೂ ನಾನು ಸಾಕಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ:ಮೋದಿ ಅವಧಿಯಲ್ಲಿ ಆದಾಯ ಹೆಚ್ಚಾಗಿದೆಯೆಂದು ಹೇಳಿದ್ರೆ ಸನ್ಮಾನ- ಪ್ರಮೋದ್
ಹಾಗೆಯೇ ತಮ್ಮ ಗೋಶಾಲೆಯಲ್ಲಿ ಹಸುಗಳು ಹಾಕಿದ್ದ 25 ಗಂಡು ಕರುಗಳಲ್ಲಿ 17 ಗಂಡು ಕರುಗಳು ನನ್ನಷ್ಟೆ ಎತ್ತರ ಬೆಳೆದಿವೆ. ಎರಡು ಬಂಜೆ ದನಗಳನ್ನೂ ಕೂಡ ನಾನು ಸಾಕುತ್ತಿದ್ದೇನೆ. ಆದ್ರೆ ನಾನು ಇವತ್ತು ಬಿಜೆಪಿ ಅವರನ್ನ ಕೇಳುತ್ತಿದ್ದೇವೆ ಹಿಂದೂ, ಗೋಮಾತೆಯೆಂದು ಹೇಳುವ ನೀವು ಎಷ್ಟು ದನಕರುಗಳನ್ನು ಸಾಕಿದ್ದೀರಿ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯವರದ್ದು ಬಾಯ್ಮಾತಿನ ಪ್ರೀತಿ ಎಂದು ಪರೋಕ್ಷವಾಗಿ ಕಿಡಿಕಾರಿದರು.