Latest

ಎಲ್ಲಾ ಮುಖ್ಯಮಂತ್ರಿಗಳು ಫೋನ್ ಕದ್ದಾಲಿಸಿಲ್ವಾ?: ಪ್ರಮೋದ್ ಮಧ್ವರಾಜ್

ಉಡುಪಿ: ಫೋನ್ ಶೋಧನೆ ಹೊಸದೇನು ಅಲ್ಲ. ಈ ಹಿಂದೆ ರಾಮಕೃಷ್ಣ ಹೆಗ್ಡೆ ಕಾಲದಿಂದಲು ಫೋನ್ ಶೋಧನೆ ನಡೆದಿದೆ ಎಂದು ಫೋನ್ ಕದ್ದಾಲಿಕೆ ಪ್ರಕರಣವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಎಲ್ಲಾ ಮುಖ್ಯಮಂತ್ರಿಗಳು ಅವರವರ ಕಾಲದಲ್ಲಿ ಫೋನ್ ಕದ್ದಾಲಿಕೆ ಮಾಡಿಸಿರಬಹುದು. ಸಿಎಂ ಕೈಕೆಳಗಿನ ಗುಪ್ತದಳ ಟೆಲಿಫೋನ್ ಕದ್ದಾಲಿಕೆ ಮಾಡುತ್ತದೆ. ಫೋನ್ ಕದ್ದಾಲಿಕೆಯಿಂದ ಯಾವುದೇ ಪಕ್ಷ ಹೊರತಾಗಿಲ್ಲ. ರಾಜಕೀಯ ವಿಚಾರ, ಆಡಳಿತಾತ್ಮಕ ಭಧ್ರತಾ ವಿಚಾರ ಕ್ರೋಡೀಕರಣಕ್ಕೆ ಮಾಡುವ ಪ್ರಕ್ರಿಯೆ ಇದು ಎಂದರು.

ಸಿಎಂ ಯಡಿಯೂರಪ್ಪ ರಾಜಕೀಯ ಲಾಭಕ್ಕಾಗಿ ಪ್ರಕರಣ ಬಳಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಹಲವಾರು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದೆ. ಕೊಟ್ಟ ಪ್ರಕರಣಗಳ ಯಾವುದೇ ರಿಸಲ್ಟ್ ಬಂದಿಲ್ಲ. ವಿಳಂಬ ಧೋರಣೆಗೆ, ರಾಜಕೀಯ ಕೆಸರೆರೆಚಾಟಕ್ಕೆ ಪ್ರಕರಣವನ್ನು ಉಪಯೋಗಿಸುವ ಹುನ್ನಾರ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.

ಈ ಹಿಂದೆ ಬಿಜೆಪಿ, ಸಿಬಿಐಯನ್ನು ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಎನ್ನುತ್ತಿದ್ದರು. ನಮ್ಮ ಅವಧಿಯಲ್ಲಿ ಅತಿ ಹೆಚ್ಚು ಪ್ರಕರಣ ಸಿಬಿಐಗೆ ಕೊಟ್ಟಿದ್ದೇವೆ. ಸಿಬಿಐ ಈವರೆಗೆ ಯಾವುದೇ ತನಿಖೆ ಮಾಡಿಲ್ಲ. ಈಗ ಸಿಬಿಐ ಮೇಲೆ ಬಿಜೆಪಿಗೆ ಬಹಳ ನಂಬಿಕೆ ಬಂದಿದೆ. ಇದು ಕಾಂಗ್ರೆಸ್‍ಗೂ-ಬಿಜೆಪಿಗೂ ಇರುವ ವ್ಯತ್ಯಾಸ ಎಂದು ಮಧ್ವರಾಜ್ ಬಿಜೆಪಿಗೆ ಚಾಟಿ ಬೀಸಿದರು.

Leave a Reply

Your email address will not be published. Required fields are marked *

Back to top button