-ಒಂದು ಕಾಲದ ಭದ್ರಕೋಟೆಯನ್ನೇ ಜೆಡಿಎಸ್ ಗೆ ಬಿಟ್ಟುಕೊಟ್ಟ ಕಾಂಗ್ರೆಸ್
ಉಡುಪಿ: ಅಸ್ತಿತ್ವವೇ ಇಲ್ಲದ ಕರಾವಳಿಯಲ್ಲೂ ಜೆಡಿಎಸ್ ಮ್ಯಾಜಿಕ್ ಮಾಡುವ ಕನಸಿನಲ್ಲಿದೆ. ಕಾಂಗ್ರೆಸ್ ನ ಜನಪ್ರಿಯ ರಾಜಕಾರಣಿ ಪ್ರಮೋದ್ ಮಧ್ವರಾಜ್ ರನ್ನು ಸೆಳೆಯಲು ಜೆಡಿಎಸ್ ಪ್ಲಾನ್ ಮಾಡಿಕೊಂಡಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಮಧ್ವರಾಜರನ್ನು ಫೀಲ್ಡಿಗೆ ಇಳಿಸಲು ಜೆಡಿಎಸ್ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ.
2019ರ ಲೋಕಸಭಾ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದೆ. ಮೈತ್ರಿಧರ್ಮ ಪಾಲನೆಗೆ ಮುಂದಾದ ಕಾಂಗ್ರೆಸ್ ತನ್ನ ಒಂದು ಕಾಲದ ಭದ್ರಕೋಟೆಯನ್ನೇ ಜೆಡಿಎಸ್ ಗೆ ಒತ್ತೆ ಇಟ್ಟಿದೆ. ಬಿಜೆಪಿ ನಾಯಕ ಜಯಪ್ರಕಾಶ್ ಹೆಗ್ಡೆ ಜೆಡಿಎಸ್ ಗೆ ಬರಬಹುದು ಅನ್ನೋ ನಿರೀಕ್ಷೆ ಸುಳ್ಳಾಗಿದೆ.
Advertisement
Advertisement
ವೈಎಸ್ ವಿ ದತ್ತಾ, ಬೋಜೇಗೌಡ ಹೆಸರುಗಳ ನಡುವೆ ಗಟ್ಟಿ ಅಭ್ಯರ್ಥಿಗಾಗಿ ತಡಕಾಡಿದ ಜೆಡಿಎಸ್, ಕೊನೆಗೂ ಯಶಸ್ವಿಯಾದ ಲಕ್ಷಣಗಳು ಗೋಚರಿಸುತ್ತಿವೆ. ಉಡುಪಿಯ ಪ್ರಭಾವಿ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಜೆಡಿಎಸ್ ನಿಂದ ಕಣಕ್ಕಿಳಿಯುವುದು ಬಹುತೇಖ ಖಚಿತವಾಗಿದೆ. ಕಳೆದ ಎರಡು ದಿನಗಳಿಂದ ಪ್ರಮೋದ್ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದಾರೆ. ಜೆಡಿಎಸ್ ವರಿಷ್ಠರು ಪ್ರಮೋದ್ ಗೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಫರ್ ಕೊಟ್ಟಿದ್ದಾರೆ. ಕಾಂಗ್ರೆಸ್ ನಾಯಕರ ಮನವೊಲಿಸಿ ಜೆಡಿಎಸ್ ಚಿಹ್ನೆಯಿಂದ ಕಣಕ್ಕಿಳಿಯಲು ಪ್ರಮೋದ್ ತಯಾರಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Advertisement
Advertisement
ಉಡುಪಿಯ ಹಾಲಿ ಸಂಸದೆ ಶೋಭಾ ಕರಂದ್ಲಾಜೆಯನ್ನು ಕಣಕ್ಕಿಳಿಸುವುದು ಪಕ್ಕಾ ಆಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರ ಬಿಟ್ಟು ಎಲ್ಲಾ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹಾಗಾಗಿ ಪ್ರಮೋದ್ ಮಧ್ವರಾಜ್ ರನ್ನ ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ಸಡ್ಡು ಹೊಡೆಯುವ ಯೋಜನೆ ಹಾಕಿಕೊಂಡಿದೆ. ಪ್ರಮೋದ್ ನಿರ್ಧಾರಕ್ಕೆ ಕಾಂಗ್ರೆಸ್ ನ ಹಿರಿಯ ನಾಯಕರ ಸಮ್ಮತಿಯೂ ಇದೆ ಎನ್ನಲಾಗುತ್ತಿದೆ. ಆದ್ರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಮೋದ್ ಅವರನ್ನು ಜೆಡಿಎಸ್ ಬಿಟ್ಟುಕೊಡಲು ಸಾಧ್ಯವಾಗುತ್ತಿಲ್ಲ. ಕೈ ಚಿಹ್ನೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರ ಒತ್ತಾಯಿಸಿದ್ದಾರೆ.
ವಿಧಾನಸಭಾ ಚುನಾವಣೆಯ ವೇಳೆ ಪ್ರಮೋದ್ ಬಿಜೆಪಿ ಸೇರ್ಪಡೆಯಾಗ್ತಾರೆ ಎಂದು ಸುದ್ದಿ ಹಬ್ಬಿತ್ತು. ಕಾಂಗ್ರೆಸ್ ಪಕ್ಷದಲ್ಲಿ ನಂಬರ್ ಒನ್ ಶಾಸಕ ಎಂಬ ಹೆಸರಿದ್ದರೂ ಪ್ರಮೋದ್ ಹೀನಾಯ ಸೋಲು ಕಂಡಿದ್ದರು. ಈಗ ಜೆಡಿಎಸ್ ಮನೆ ಬಾಗಿಲಲ್ಲಿದ್ದಾರೆ. ಉಡುಪಿ ಚಿಕ್ಕಮಗಳೂರು ಬಿಜೆಪಿಯ ಭದ್ರ ಕೋಟೆಯಾಗಿದ್ದು ಗೆಲುವು ಸುಲಭ ಅಲ್ಲ ಅನ್ನೋದು ರಾಜಕೀಯ ನಾಯಕರ ಲೆಕ್ಕಾಚಾರವಾಗಿದೆ. ಇಷ್ಟಿದ್ದರೂ ಕರಾವಳಿಯಲ್ಲಿ ಅಸ್ತಿತ್ವವೇ ಇಲ್ಲದ ಜೆಡಿಎಸ್ ನಿಂದ ಮಧ್ವರಾಜ್ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳುತ್ತಾರೆ ಎಂಬುವುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.