– ಗೋಪಾಲ್ ಜೋಶಿ ವಿರುದ್ಧದ ವಂಚನೆ ಆರೋಪಕ್ಕೆ ಸಚಿವರ ಸ್ಪಷ್ಟನೆ
ನವದೆಹಲಿ: ಗೋಪಾಲ್ ಜೋಶಿ (Gopal Joshi ) ನನ್ನ ಸಹೋದರ ಅದರಲ್ಲಿ ಯಾವುದೇ ಅನುಮಾನವಿಲ್ಲ. ಈಗ ಅವರಿಗೂ ನನಗೂ ಯಾವುದೇ ಕೌಟುಂಬಿಕ ಹಾಗೂ ಹಣಕಾಸಿಕ ಸಂಬಂಧ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಗೋಪಾಲ್ ಜೋಶಿಯವರ ವಿರುದ್ಧ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವ ಆಮಿಷ ತೋರಿಸಿ 2 ಕೋಟಿ ರೂ. ವಂಚಿಸಿದ ಆರೋಪಕ್ಕೆ (Fraud Case) ಸಂಬಂಧಿಸಿದಂತೆ ದೆಹಲಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಗುರುವಾರ ನನ್ನ ಸಹೋದರನ ಮೇಲೆ ಎಫ್‌ಐಆರ್ ದಾಖಲಾಗಿದೆ. ಇಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಿದ್ದಾರೆ. ನನಗೆ ಯಾರೂ ಸಹೋದರಿ ಇಲ್ಲ. ನಾವು ನಾಲ್ಕು ಜನ ಸಹೋದರರು, 1984 ರಲ್ಲಿ ಒಬ್ಬ ಸಹೋದರ ತೀರಿ ಹೋದರು. ಈಗ ಮೂವರು ಸಹೋದರರು ಇದ್ದೇವೆ. ಗೋಪಾಲ್ ಜೋಶಿ ಅವರು ನನ್ನ ಹಿರಿಯ ಸಹೋದರ ಇದರ ಜೊತೆಗೆ ಸಹೋದರಿ ಅಂತಲೂ ಬರುತ್ತಿದೆ ಅವರು ಯಾರು ಗೊತ್ತಿಲ್ಲ ಎಂದಿದ್ದಾರೆ.
ನನ್ನ ಹಿರಿಯ ಸಹೋದರ ಗೋಪಾಲ್ ಜೋಶಿ ಅವರು ನಾನು ಬೇರೆಯಾಗಿ 33 ವರ್ಷಗಳು ಕಳೆದಿವೆ. ಈ ಹಿಂದೆಯೂ ಅವರ ವಿರುದ್ಧ ಎರಡು ಸಲ ಆರೋಪ ಕೇಳಿ ಬಂದಿತ್ತು. ಅದಕ್ಕಾಗಿ ನಾನು ಹಿಂದೆಯೇ ಗೋಪಾಲ್ ಜೋಶಿ ಅವರೊಂದಿಗೆ ನನ್ನ ಹೆಸರು ಲಿಂಕ್ ಮಾಡಬಾರದು ಎಂದು ಕೋರ್ಟ್‌ನಿಂದ ಆದೇಶ ತಂದಿದ್ದೇನೆ. ಸಾಮಾಜಿಕವಾಗಿ ಆರ್ಥಿಕವಾಗಿ ಯಾವುದೇ ಸಂಬಂಧ ಇಲ್ಲ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಐದು ಬಾರಿ ಸಂಸದ, ಬಿಜೆಪಿ ಜಿಲ್ಲಾ ಅಧ್ಯಕ್ಷನಾಗಿದ್ದೇನೆ. ಸಾರ್ವಜನಿಕ ಜೀವನದಲ್ಲಿದ್ದೇನೆ, ಯಾರಾದರೂ ಬಂದು ಫೋಟೋ ತೆಗೆಸಿಕೊಂಡಿದ್ದರೆ ಗೊತ್ತಿಲ್ಲ. ನನ್ನ ಮಕ್ಕಳ ಮದುವೆಗೆ ಸಹೋದರರನ್ನ ಅನಿವಾರ್ಯವಾಗಿ ಆಹ್ವಾನ ಮಾಡಿದ್ದು ಬಿಟ್ಟರೇ, ಅವರಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ಅವರು ದುಡ್ಡು ಕಳೆದುಕೊಂಡಿದ್ದು ದುರ್ದೈವ, ನನ್ನನ್ನು ಬಂಧಿಸಬೇಕು ಎನ್ನುವುದು ಕಾಂಗ್ರೆಸ್ ಬೌದ್ಧಿಕ ದಿವಾಳಿತನ ತೋರಿಸುತ್ತದೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಕಾನೂನು ಕ್ರಮ ಆಗಲಿ, ನಾನು ಶುದ್ಧ ಹಸ್ತದಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಮೇಲೆ ಮಾಡಿರುವ ಆರೋಪಗಳಲ್ಲ ಬೋಗಸ್, ಕಾನೂನಿನ ಪ್ರಕಾರ ಏನು ಬೇಕಾದರೂ ಕ್ರಮವಾಗಲಿ ಎಂದು ಹೇಳಿದ್ದಾರೆ.